ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ 17 ಶಾಸಕರನ್ನು ಆಪರೇಷನ್ ಮಾಡಲು ಬಳಸಿದ ಹಣದ ಮೂಲ ಯಾವುದು ಎಂದು ಬಿಜೆಪಿ ಪಕ್ಷವನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬಿಜೆಪಿ ಸೇರಲು ರಾಷ್ಟ್ರೀಯ ಬಿಜೆಪಿ ನಾಯಕರು ಹಣದ ಆಫರ್ ನೀಡಿದ ಬಗ್ಗೆ ಸ್ವತಃ ಒಪ್ಪಿಕೊಂಡಿದ್ದಾರೆ. 17 ಶಾಸಕರನ್ನು ಬಿಜೆಪಿ ಅಕ್ರಮ ದುಡ್ಡಿನಿಂದ ಖರೀದಿಸಿದೆ ಎಂಬುದು ಕೊನೆಗೂ ನಿಜವಾಗಿದೆ. ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಅಕ್ರಮ ಸಂತಾನ. ಹಾಗಾದರೆ ಶಾಸಕರ ಖರೀದಿಗೆ ಬಳಕೆಯಾದ ಹಣದ ಮೂಲ ಯಾವುದು? ಎಂದು ಪ್ರಶ್ನಿಸಿದ್ದಾರೆ.
ಅಕ್ರಮ ಹಣದ ತನಿಖೆ ನಡೆಸುವಿರಾ..?
ಆಪರೇಷನ್ ಕಮಲ ಎಂಬ ಅನಿಷ್ಟ ಸಂತತಿಯ ಸೃಷ್ಟಿಕರ್ತರಾದ ಬಿಜೆಪಿಯವರು 17 ಶಾಸಕರ ಖರೀದಿಗೆ ಕೋಟಿ ಕೋಟಿ ಸುರಿದಿರುವುದು ಸತ್ಯ. 'ನಾ ಕಾವೂಂಗಾ ನಾ ಕಾನೇ ದೂಂಗಾ' ಎಂದು ಪೋಸ್ ಕೊಡುವ ಮೋದಿಯವರೆ, ಕರ್ನಾಟಕದಲ್ಲಿ 17 ಶಾಸಕರ ಖರೀದಿಗೆ ಸುರಿದ ಅಕ್ರಮ ಹಣ ಯಾರು ತಿಂದು ವಿಸರ್ಜನೆ ಮಾಡಿದ ಹಣ ಎಂದು ಹೇಳುವಿರಾ? ಈ ಅಕ್ರಮ ಹಣ ಮೂಲದ ಬಗ್ಗೆ ತನಿಖೆ ನಡೆಸುವಿರಾ? ಎಂದು ಪ್ರಶ್ನಿಸಿದ್ದಾರೆ.