ಬೆಂಗಳೂರು:ನೆರೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ 50 ದಿನಗಳಿಂದ ಇಲ್ಲದ ಕಾಳಜಿ, ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸರ್ಕಾರಕ್ಕೆ ಬಂದಿರುವುದು ವಿಪರ್ಯಾಸ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಪ-ಚುನಾವಣೆ ಘೋಷಣೆಯಾದ ಹಿನ್ನೆಲೆ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವ ಮಾತನ್ನು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದು ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ಮೇಲಿರುವ ನಿಜವಾದ ಕಾಳಜಿ ಅಲ್ಲ, ಬದಲಾಗಿ ಉಪ ಚುನಾವಣೆ ಗೆಲ್ಲುವ ಮತ್ತೊಂದು ತಂತ್ರಗಾರಿಕೆ. ನೆರೆಯಿಂದ ಹಾನಿಗೀಡಾದ ಪ್ರದೇಶಗಳ ಸಂತ್ರಸ್ತರಿಗೆ ಸೂಕ್ತ ಕಾಯಕಲ್ಪ ಒದಗಿಸುವ ಕಾರ್ಯ ಆಗುತ್ತಿಲ್ಲ. ಹಣ ಬಿಡುಗಡೆ ಮಾಡುತ್ತಿಲ್ಲ ಮತ್ತು ಕೇಂದ್ರ ಸರ್ಕಾರ ಕೂಡ ಇತ್ತ ಗಮನ ಹರಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ರಾಜ್ಯ ಸರ್ಕಾರ ಯಾವುದೇ ಪರಿಹಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿ ಬಳಿ ಅನುದಾನ ತರಬೇಕಿತ್ತು, ಅದನ್ನೂ ಸಿಎಂ ಯಡಿಯೂರಪ್ಪ ಮಾಡುತ್ತಿಲ್ಲ. ಈಗ ಉಪಚುನಾವಣೆ ಬಂದಿರುವುದರಿಂದ ಕೇಂದ್ರದಿಂದ ಹಣ ತರುವುದಾಗಿ ಹೇಳುತ್ತಿದ್ದಾರೆ. ಇವರಿಗೆ ಜನರ ಬಗ್ಗೆ ಬದ್ಧತೆ ಇಲ್ಲ, ವೋಟಿಗಾಗಿ ಎದ್ದುಬಿದ್ದು ಓಡಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ರು.