ಬೆಂಗಳೂರು: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ತಪಾಸಣೆ ಹೆಚ್ಚಿಸಲು ಸೂಚಿಸಿದರೆ, ರಾಜ್ಯ ಸರ್ಕಾರ ಕಡಿಮೆ ಮಾಡಲು ಸುತ್ತೋಲೆ ಹೊರಡಿಸಿರುವುದು ವಿಪರ್ಯಾಸ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಟ್ವೀಟ್ ಮಾಡಿರುವ ಅವರು, ಪ್ರಧಾನಿಯವರು ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸುವಂತೆ ಹೇಳುತ್ತಾರೆ. ಆದರೆ, ರಾಜ್ಯ ಸರ್ಕಾರ ಕೊರೊನಾ ಟೆಸ್ಟ್ ಕಡಿಮೆ ಮಾಡಲು ಸುತ್ತೋಲೆ ಹೊರಡಿಸಿದೆ. ಇದರರ್ಥವೇನು? ಟೆಸ್ಟ್ ಕಡಿಮೆ ಮಾಡಿಸಿ ಸೋಂಕಿತರ ಸಂಖ್ಯೆ ಕುಗ್ಗಿದೆ ಎಂದು ಬಿಂಬಿಸುವ ಕುತಂತ್ರವಲ್ಲವೆ? ಚಾಪೆ ಕೆಳಗೆ ನುಗ್ಗುವ ಈ ತಂತ್ರಗಳು ಜನರ ಜೀವದೊಂದಿಗೆ ಚೆಲ್ಲಾಟವೇ ಹೊರತು ಮತ್ತೇನಲ್ಲ ಎಂದಿದ್ದಾರೆ.
ರೋಗ ಲಕ್ಷಣಗಳಿಲ್ಲದವರಿಗೆ ಪರೀಕ್ಷೆ ಮಾಡಿಸಬಾರದು ಎಂಬ ಸರ್ಕಾರದ ಸುತ್ತೋಲೆಯೇ ಅವಿವೇಕತನದ್ದು. ಕೊರೊನಾ 2ನೇ ಅಲೆ ರೂಪಾಂತರ ವೈರಸ್. ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ನೆಗೆಟಿವ್ ಬಂದವರೂ ಕೊನೆಗೆ ಕೋವಿಡ್ಗೆ ತುತ್ತಾಗಿ ಸಾವನಪ್ಪಿದ್ದಾರೆ. ಸರ್ಕಾರಕ್ಕೆ ಜವಾಬ್ದಾರಿ ಹಾಗೂ ಜನರ ಆರೋಗ್ಯದ ಕಾಳಜಿಯಿದ್ದರೆ ಇಂತಹ ಮೂರ್ಖತನದ ಸುತ್ತೋಲೆ ಹೊರಡಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇಮ್ಯುನಿಟಿ ಹೆಚ್ಚು ಇರುವ ವ್ಯಕ್ತಿಯಲ್ಲಿ ಸೋಂಕು ಇದ್ದರೂ ಆತನಲ್ಲಿ ರೋಗದ ಗುಣಲಕ್ಷಣ ಕಾಣುವುದಿಲ್ಲ. ಆ ವ್ಯಕ್ತಿಯ ಪರೀಕ್ಷೆ ಮಾಡದೇ ಹೋದರೆ ಆತ ಹತ್ತಾರು ಜನರ ಸಂಪರ್ಕಕ್ಕೆ ಬಂದೇ ಬರುತ್ತಾನೆ. ಆತನಿಂದ ಸೋಂಕು ಹರಡುವುದಿಲ್ಲ ಎಂಬುದಕ್ಕೆ ಖಾತ್ರಿಯೇನು? ಆತನ ಸಂಪರ್ಕಕ್ಕೆ ಬಂದವರಲ್ಲಿ ಇಮ್ಯುನಿಟಿ ಕಡಿಮೆ ಇದ್ದರೆ ಅವರ ಜೀವಕ್ಕೆ ಅಪಾಯವಲ್ಲವೆ.? ಎಂದಿದ್ದಾರೆ.
ಟೆಸ್ಟ್ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಈ ಕ್ರಿಮಿನಲ್ ಸಲಹೆ ಕೊಟ್ಟವರದ್ದು ಕೊಲೆಗಡುಕ ಮನಸ್ಥಿತಿ ಇರಬೇಕು. ಸೋಂಕಿತರ ಸಂಖ್ಯೆ ಕಡಿಮೆ ತೋರಿಸಿದ ಮಾತ್ರಕ್ಕೆ ಸೋಂಕು ಕಡಿಮೆಯಾಗುವುದಿಲ್ಲ. ಸರ್ಕಾರದ ಈ ಮೂರ್ಖ ನಿರ್ಧಾರದಿಂದ ಸೋಂಕು ಇನ್ನಷ್ಟು ಹೆಚ್ಚಾಗುವುದು ಖಡಾಖಂಡಿತ. ಪ್ರಚಾರದ ತೆವಲಿಗೆ ರಾಜ್ಯ ಸರ್ಕಾರ ಇಂತಹ ಕೀಳುಮಟ್ಟಕ್ಕೆ ಇಳಿಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.