ಬೆಂಗಳೂರು: ನಾಡಧ್ವಜ ಅಗತ್ಯ ಇಲ್ಲ ಎನ್ನುವ ಸಚಿವ ಸಿ.ಟಿ.ರವಿ ಅವರ ಹೇಳಿಕೆ ಕನ್ನಡಿಗರ ಆತ್ಮಗೌರವಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಹಲವು ಕನ್ನಡ ಹೋರಾಟಗಾರರ ಮನವಿಯಂತೆ ಧ್ವಜದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ನಾಡಧ್ವಜ, ನಾಡಗೀತೆಯಂತೆಯೇ ಕನ್ನಡಿಗರ ಅಸ್ಮಿತೆ, ಸ್ವಾಭಿಮಾನದ ಪ್ರತೀಕ. ಯಾರನ್ನೋ ಮೆಚ್ಚಿಸಲು ಕನ್ನಡಿಗರಿಗೆ ದ್ರೋಹ ಬಗೆಯಬೇಡಿ ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಜನರ ಕ್ಷಮೆಯಾಚಿಸಿ:
ಸಚಿವ ಸಿ.ಟಿ.ರವಿ ರಾಜ್ಯದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.
ಟ್ವೀಟ್ ಮೂಲಕ ಸಿ.ಟಿ.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ನಾಡಧ್ವಜದಿಂದ ದೇಶಕ್ಕೆ ಯಾವ ಧಕ್ಕೆಯೂ ಬರುವುದಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಾವಿರ ವರ್ಷಗಳ ಇತಿಹಾಸಕ್ಕೆ ಇಂಬನ್ನು ನೀಡುವ ಅನನ್ಯ ಗುರುತು ಬೇಕಾಗಿದೆ. ಇದನ್ನು ನಾಡಧ್ವಜ ನೀಡುತ್ತದೆ. ನಮ್ಮದೇ ಆದ ಧ್ವಜವನ್ನು ನಿರಾಕರಿಸುವುದು ರಾಜ್ಯಕ್ಕೆ ಮಾಡುವ ಅವಮಾನ ಎಂದು ಕಿಡಿ ಕಾರಿದ್ದಾರೆ.
ಕನ್ನಡ ಧ್ವಜ ಭಾರತೀಯತೆಗೆ ಬಂಡಾಯವಾದುದ್ದಲ್ಲ. ಕನ್ನಡತನವನ್ನು ಹೇಗೆ ನಾಡಗೀತೆ ಎತ್ತಿ ಹಿಡಿಯುತ್ತದೆಯೋ ನಾಡ ಧ್ವಜವೂ ಹಾಗೆಯೇ ಬೆಂಬಲಿಸುತ್ತದೆ. ಕನ್ನಡಿಗರೇ ಆಗಿ ಕನ್ನಡ ಧ್ವಜದ ಬಗ್ಗೆ ಕೀಳಾಗಿ ಮಾತನಾಡುವುದು ತಾಯಿ ಭುವನೇಶ್ವರಿಯ ಮಕ್ಕಳೇ ತಮ್ಮ ತಾಯಿಗೆ ಅವಮಾನ ಮಾಡಿದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.