ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇದರಲ್ಲಿ ಸಿಲುಕಿಕೊಂಡಿರುವ ನಾಗರಿಕರ ರಕ್ಷಣೆಗೆ ಧಾವಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ನೆರೆಪೀಡಿತ ಪ್ರದೇಶಗಳಿಗೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗುವಂತೆ ಕಾರ್ಯಕರ್ತರಿಗೆ ದಿನೇಶ್ ಸೂಚನೆ - ಪ್ರವಾಹ
ಭಾರಿ ಮಳೆಯಿಂದಾಗಿ 15 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಆ ಪ್ರದೇಶಗಳಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಬೇಕೆಂದು ದಿನೇಶ್ ಗುಂಡೂ ರಾವ್ ಟ್ವೀಟ್ ಮಾಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 15 ಜಿಲ್ಲೆಗಳಲ್ಲಿ ನೆರೆ ಉಂಟಾಗಿ ಹಳ್ಳಿಗಳು ಮುಳುಗಿವೆ. ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ರೈತರು, ಜಾನುವಾರುಗಳು ಸಂಕಷ್ಟದಲ್ಲಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಎಂದಿದ್ದಾರೆ. ಸಂಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸುವುದು ನಮ್ಮೆಲ್ಲರ ಜವಾಬ್ದಾರಿ. ಪಕ್ಷದ ಕಾರ್ಯಕರ್ತರು ನೆರೆಪೀಡಿತ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯಗಳಲ್ಲಿ ನೆರವಾಗಬೇಕೆಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡವನ್ನು ರಚಿಸಿ ನೆರೆಪೀಡಿತ ಪ್ರದೇಶಗಳ ವೀಕ್ಷಣೆಗೆ ಕಳಿಸಿದ್ದು, ನಾಳೆಯಿಂದ ತಮ್ಮ ಪ್ರವಾಸ ಆರಂಭಿಸಲಿವೆ. ಇದು ಒಂದೆಡೆಯಾದರೆ, ಜೊತೆ ಜೊತೆಗೆ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ರಕ್ಷಣಾ ಕಾರ್ಯಕ್ಕೆ ಧಾವಿಸಬೇಕೆಂದು ದಿನೇಶ್ ಸೂಚಿಸಿದ್ದಾರೆ.