ಬೆಂಗಳೂರು: ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರವನ್ನು ನಂಬಿ ಪಾಲಕರು ಮಕ್ಕಳನ್ನು ಹೇಗೆ ಶಾಲೆಗೆ ಕಳಿಸಲು ಮುಂದಾಗುತ್ತಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸುರೇಶ್ ಕುಮಾರ್ ರವರೆ, ಶಾಲೆ ಮತ್ತೆ ಆರಂಭಿಸಬೇಕೆಂಬ ಕಳಕಳಿಯನ್ನು ಒಪ್ಪುತ್ತೇನೆ. ಆದರೆ, ಸರ್ಕಾರದ ಮೇಲೆ ಯಾವ ಭರವಸೆ ಇಟ್ಟು ಮಕ್ಕಳನ್ನು ಶಾಲೆಗೆ ಕಳಿಸಬೇಕು? ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ದೃಢ ಕೇಸ್‌ಗಳಲ್ಲಿ ರಾಜ್ಯ ದೇಶದಲ್ಲೇ 2ನೆ ಸ್ಥಾನದಲ್ಲಿದೆ. ಹೀಗಿರುವಾಗ ಮಕ್ಕಳ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡಲು ಸಾಧ್ಯವೆ? ಎಂದಿದ್ದಾರೆ.
ಸುರೇಶ್ ಕುಮಾರ್ ಅವರೇ, ಸಾಮಾಜಿಕ ಅಂತರದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಮಕ್ಕಳ ಬೌಧಿಕ ಮಟ್ಟ ಪರಿಸ್ಥಿತಿಯ ಗಂಭೀರತೆ ಅರಿಯುವಷ್ಟು ಪ್ರಬುದ್ಧವಲ್ಲ. ಹಾಗಾಗಿ ಮಕ್ಕಳು ಶಾಲೆಗಳಲ್ಲಿ ಸಂಪೂರ್ಣವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವಿಶ್ವಾಸವಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ. ಮಕ್ಕಳನ್ನು ಅಪಾಯಕ್ಕೆ ದೂಡಿದಂತಾಗುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಶಾಲೆ ಆರಂಭಿಸುವ ಬಗ್ಗೆ ಪೋಷಕರಿಂದ, ಜನಪ್ರತಿನಿಧಿಗಳಿಂದ ನೀವು ಸಲಹೆ ಕೇಳಿದ್ದೀರಾ?. ಆದರೆ, ಮಕ್ಕಳನ್ನು ಶಾಲೆಗೆ ಕಳಿಸಲು ನಿಮ್ಮ ಸರ್ಕಾರ ಕೊಡುವ ಭರವಸೆಯೇನು? ಶಾಲೆ ತೆರೆಯಲು ಸರ್ಕಾರದಿಂದ ತೆಗೆದುಕೊಂಡಿರುವ ಮುಂಜಾಗೃತಾ ಕ್ರಮ ಮತ್ತು ಮಾಡಿಕೊಂಡಿರುವ ಪೂರ್ವ ಸಿದ್ಧತೆಯ ಬಗ್ಗೆ ಮೊದಲು ಮಾಹಿತಿ ಕೊಡಿ ಎಂದು ಸೂಚಿಸಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ಆಕ್ರೋಶ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ಸಿಎಂ ತಮ್ಮ ಮಗನ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದ ಮಾಧ್ಯಮವನ್ನೇ ಮುಚ್ಚಿಸುವುದು ಹಿಟ್ಲರ್ ಮಾದರಿಯ ಕ್ರಮ. ಖಾಸಗಿ ವಾಹಿನಿ ವಿರುದ್ಧ ಸಿಎಂ ಬಿಎಸ್ವೈ ಕಾನೂನು ಚೌಕಟ್ಟಿನಲ್ಲಿ ಹೋರಾಡಬೇಕಿತ್ತು. ಆದರೆ, ತಮ್ಮ ತಪ್ಪು ತೋರಿಸಿದ್ದವರನ್ನೇ ಮುಗಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವನ್ನೇ ಹೊಸಕಿ ಹಾಕಿದ ನಿಮ್ಮ ನಡೆ ಅಕ್ಷಮ್ಯ ಮತ್ತು ಖಂಡನೀಯ ಎಂದು ಹೇಳಿದ್ದಾರೆ.