ಬೆಂಗಳೂರು:ಸ್ವಾರ್ಥ ರಾಜಕಾರಣಕ್ಕಾಗಿ ಜಿಲ್ಲಾ ವಿಭಜನೆ ಮಾಡ ಕೂಡದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೂತನ ಜಿಲ್ಲೆಗಳಿಗೆ ಬೇಡಿಕೆ ಇಡುತ್ತಿರುವ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಹೆಚ್.ವಿಶ್ವನಾಥ್ ರಾಜಕೀಯದಲ್ಲಿದ್ದಾರೆ. ಜಿಲ್ಲೆ ವಿಭಜನೆ ಬಗ್ಗೆ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು. ಈಗ ಉಪಚುನಾವಣೆ ಬರುತ್ತಿದೆ ಎಂದು ಹೀಗೆಲ್ಲಾ ಗಿಮಿಕ್ ಮಾಡಬಾರದು ಎಂದು ಕಿಡಿಕಾರಿದರು.
ನೂತನ ಜಿಲ್ಲೆಗಳ ರಚನೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ವೈಜ್ಞಾನಿಕವಾಗಿ ಚರ್ಚೆ ಮಾಡಿ ಒಳ್ಳೆಯ ವಾತಾವರಣದಲ್ಲಿ ಚರ್ಚೆ ಆಗಬೇಕು. ಅದು ಬಿಟ್ಟು ವೈಯಕ್ತಿಕ ಲಾಭಕ್ಕಾಗಿ ಹೊಸ ಜಿಲ್ಲೆಗಳ ರಚನೆ ಬಗ್ಗೆ ಮಾತನಾಡಬಾರದು ಎಂದು ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದ್ರು.
ಉಪಚುನಾವಣೆ ಬಗ್ಗೆ ಚರ್ಚೆ:ನಾಳೆ ಕೆ.ಸಿ. ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಲಿದ್ದು, ಉಪ ಚುನಾವಣೆ ಸಂಬಂಧ ಸರಣಿ ಸಭೆ ನಡೆಸಲಿದ್ದಾರೆ ಎಂದು ಇದೇ ವೇಳೆ ಮಾಧ್ಯಮದವರಿಗೆ ತಿಳಿಸಿದರು.
ಮುಂದಿನ ಉಪಚುನಾವಣೆ ಹಾಗೂ ಪಕ್ಷದ ಸಂಘಟನೆ ವಿಚಾರವಾಗಿ ಸಭೆ ಕರೆದಿದ್ದೇವೆ. ನಾಳೆ ದಿನಪೂರ್ತಿ ಹಲವು ಸಭೆಗಳನ್ನು ನಡೆಸಲಿದ್ದು, ಪೂರ್ವಸಿದ್ಧತೆ ಬಗ್ಗೆ ಚರ್ಚಿಸಲಿದ್ದೇವೆ. ಸಭೆಯಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಕೂಡ ಚರ್ಚೆ ಮಾಡಲಿದ್ದೇವೆ ಎಂದರು.