ಬೆಂಗಳೂರು: ರಾಜ್ಯದ ಬೊಮ್ಮಾಯಿ ನೇತೃತ್ವದ ಸರ್ಕಾರ ಡಬಲ್ ಎಂಜಿನ್ ಸರ್ಕಾರವಲ್ಲ.ಇದು ಡೀಲಿಂಗ್ ಸರ್ಕಾರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಈ ಸರ್ಕಾರದಲ್ಲಿ ಪ್ರತಿ ಸರ್ಕಾರಿ ಉದ್ಯೋಗಕ್ಕೂ ಇಂತಿಷ್ಟು ರೇಟ್ ಎಂದು ಫಿಕ್ಸ್ ಆಗಿದೆ. PSI ನೇಮಕಾತಿಯಲ್ಲಿ ಡೀಲಿಂಗ್, ಪ್ರಾಧ್ಯಾಪಕರ ನೇಮಕಾತಿಯಲ್ಲಿ ಡೀಲಿಂಗ್, ಇಂಜಿನಿಯರ್‌ಗಳ ನೇಮಕಾತಿಯಲ್ಲೂ ಡೀಲಿಂಗ್. ಇದು ಡೀಲಿಂಗ್ ಸರ್ಕಾರವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಅರ್ಹತಾ ಪರೀಕ್ಷೆಯ ಮೂಲಕ ಸರ್ಕಾರಿ ಉದ್ಯೋಗ ಭರ್ತಿ ಮಾಡುವುದೇಕೆ? ವಿಧಾನಸೌಧವನ್ನೇ ಡೀಲಿಂಗ್ ಸೆಂಟರ್ ಮಾಡಿಕೊಂಡಿರುವಾಗ ಎಲ್ಲಾ ನೇಮಕಾತಿಯನ್ನು ಹರಾಜು ಪ್ರಕ್ರಿಯೆಯ ಮೂಲಕವೇ ನಡೆಸಲಿ. ಈ ಸರ್ಕಾರದಲ್ಲಿ ದುಡ್ಡಿದ್ದವನಿಗೆ ಉದ್ಯೋಗ ಎಂದ ಮೇಲೆ ಬಡವರು ಯಾಕೆ ಪರೀಕ್ಷೆ ಬರೆಯಬೇಕು? ಸಮಯ-ಹಣ ಯಾಕೆ ವ್ಯರ್ಥ ಮಾಡಬೇಕು? ಎಂದು ವಾಗ್ದಾಳಿ ನಡೆಸಿದ್ದಾರೆ.