ಬೆಂಗಳೂರು: ಅಧಿಕಾರಕ್ಕಾಗಿ, ಹಣಕ್ಕಾಗಿ ವಲಸೆ ಹೋದವರು ಮಾರಾಟದ ವಸ್ತುಗಳು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವರು ಬಾಂಬೆ ಟೀಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಲಸೆ ಹೋಗಿರುವುದು ಅಧಿಕಾರಕ್ಕಾಗಿ ಹಾಗೂ ದುಡ್ಡು ಬೇಕೆಂಬ ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ವಲಸೆ ಹೋಗಿದ್ದಾರೆ. ಅದಕ್ಕಾಗಿ ಅವರು ಮಾರಾಟ ಆದ ವಸ್ತುಗಳು ಎಂದು ಕಿಡಿಕಾರಿದರು.
ಹೇಳಿಕೆ ಸಮರ್ಥನೆ: ಯಾವ ಉದ್ದೇಶಕ್ಕಾಗಿ ಪಕ್ಷ ತೊರೆದು ಹೋದರು ಎಂಬುದನ್ನು ಮುಚ್ಚಿಹಾಕಲು ಆಗುವುದಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ 'ಮಾರಿಕೊಂಡವರು' ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್ ಅವರು, ಬಿ.ಕೆ. ಹರಿಪ್ರಸಾದ್ ಅವರು, ವಲಸಿಗರು ಯಾವ ರೀತಿ ಮಾರಾಟ ಆಗಿದ್ದಾರೆ ಎಂದು ಹೋಲಿಕೆ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಜನ ಆಶೀರ್ವಾದ ಮಾಡಿದಾಗ ಕಾಂಗ್ರೆಸ್ ನಿಂದ ಗೆದ್ದು ಬಂದರು. ಈಗ ಅಲ್ಲಿಗೆ ಹೋಗಿ ಏನೇನೋ ನೆಪಗಳನ್ನು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯ ಬಜೆಟ್ಗೆ ಯಾವ ಬೆಲೆ ಇರುತ್ತದೆ. ಈ ಬಜೆಟ್ ಗೆ ಏನೂ ಕಿಮ್ಮತ್ತಿಲ್ಲ. ಲೇಖಾನುದಾನ ಮಾಡ್ಕೊಂಡು ಹೋಗಬೇಕಷ್ಟೆ. ಯಾವ ಭರವಸೆಗಳನ್ನು ಬಿಜೆಪಿ ಈಡೇರಿಸುವುದಿಲ್ಲ. 200 ಭರವಸೆ ಕೊಟ್ಡಿದ್ರಲ್ಲ ಅದರಲ್ಲಿ ಶೇ10ರಷ್ಟು ಕೂಡಾ ಈಡೇರಿಸಿಲ್ಲ. ಹೀಗಿದ್ದಾಗ ಬಿಜೆಪಿಯವರ ಬಜೆಟ್ ಗೆ ಏನು ವ್ಯಾಲ್ಯೂ ಇರುತ್ತದೆ ? ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಮಾನ ಮರ್ಯಾದೆಯನ್ನು ಕಳೆದುಕೊಂಡಿದೆ. ಯಾವುದೇ ಒಂದು ಗೌರವ ಇಲ್ಲದ ಆಡಳಿತ ನಡೆಸುತ್ತಿದ್ದಾರೆ. ಮರ್ಯಾದೆಯಿಂದ ಆಡಳಿತ ನಡೆಯುತ್ತಿಲ್ಲ. ಇಷ್ಟು ಕೆಳಮಟ್ಟಕ್ಕೆ ಹೋದ ಸರ್ಕಾರ ನಾನಂತೂ ನೋಡಿರಲಿಲ್ಲ. ನಿರ್ಭೀತವಾಗಿ ಯಾವುದೇ ಮಾನದಂಡ ಇಲ್ಲದೆ ಲೂಟಿಯೇ ಮುಖ್ಯುದ್ದೇಶವಾಗಿದೆ. ಯಾವ ಅಧೋಗತಿಗೆ ಹೋಗಿದೆ ಎನ್ನುವುದಕ್ಕೆ ಗುತ್ತಿಗೆದಾರರ ಹೋರಾಟವೇ ಸಾಕ್ಷಿ ಎಂದು ಗುಡುಗಿದರು.