ಬೆಂಗಳೂರು: ಕೋವಿಡ್ ಹಿನ್ನೆಲೆ 25 ವರ್ಷಗಳ ವೈವಾಹಿಕ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಒಟ್ಟಾಗಿ ದಿನೇಶ್ ಗುಂಡೂರಾವ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರ ಪತ್ನಿ ತಬು ರಾವ್ ತಿಳಿಸಿದ್ದಾರೆ.
ಕೋವಿಡ್-19 ಸೋಂಕಿಗೆ ಒಳಗಾಗಿರುವ ದಿನೇಶ್ ಗುಂಡೂರಾವ್ ತಮ್ಮ ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿ ಇದ್ದು, ಅ. 9ಕ್ಕೆ ತಮ್ಮ 51ನೇ ವಯಸ್ಸಿಗೆ ಪದಾರ್ಪಣೆ ಮಾಡಲಿದ್ದಾರೆ. ಕಳೆದ 25 ವರ್ಷದಿಂದ ಕುಟುಂಬ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದ ದಿನೇಶ್ ಗುಂಡೂರಾವ್ಗೆ ಈ ಬಾರಿ ಆ ಅವಕಾಶ ಸಿಗುತ್ತಿಲ್ಲ.
ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅವರು ಪ್ರತ್ಯೇಕವಾಗಿ ಕ್ವಾರಂಟೈನ್ ಆಗಿದ್ದು, ಇದೇ ಮೊದಲ ಬಾರಿಗೆ ಅವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಟ್ವೀಟ್ ಮೂಲಕ ತಬು ರಾವ್ ತಿಳಿಸಿದ್ದಾರೆ.
ನಾವು ಸದ್ಯ ಪ್ರತ್ಯೇಕವಾಗಿ ಇದ್ದರೂ ನಮ್ಮಿಬ್ಬರ ಆಲೋಚನೆ ಒಂದೇ ಆಗಿದೆ. ಉತ್ತಮ ಆರೋಗ್ಯ ಮತ್ತು ಶಾಂತಿ ನಿಮ್ಮದಾಗಲಿ ಎಂದು ಆಶಿಸುತ್ತಾ ಜನ್ಮದಿನದ ಶುಭಾಶಯಗಳು ಮತ್ತು ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂದು ತಬು ರಾವ್ ಹಾರೈಸಿದ್ದಾರೆ.
ಪತ್ನಿ ಹಾಗೂ ಪುತ್ರರ ಜೊತೆ ಪ್ರತಿ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ದಿನೇಶ್ ಗುಂಡೂರಾವ್ ಕೋವಿಡ್-19 ಮಹಾಮಾರಿಯ ಕಾರಣದಿಂದ ಅನಿವಾರ್ಯವಾಗಿ ಕುಟುಂಬದಿಂದ ದೂರ ಉಳಿದಿದ್ದಾರೆ. ಈ ಸಂದರ್ಭದಲ್ಲಿ ತಬು ರಾವ್ ಭಾವನಾತ್ಮಕ ಸಂದೇಶದ ಮೂಲಕ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.
ಪ್ರತಿ ವರ್ಷ ಹುಟ್ಟುಹಬ್ಬವನ್ನು ಸಂಭ್ರಮದಿಂದ ಕುಟುಂಬ ಸದಸ್ಯರು ಹಾಗೂ ಕಾರ್ಯಕರ್ತರ ನಡುವೆ ಆಚರಿಸಿಕೊಳ್ಳುತ್ತಿದ್ದ ದಿನೇಶ್ ಗುಂಡೂರಾವ್ ಈ ಬಾರಿ ಅವಕಾಶದಿಂದ ವಂಚಿತರಾಗಿದ್ದಾರೆ. ಮನೆಯಲ್ಲೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.