ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಕರ್ನಾಟಕ ಪ್ರದೇಶ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಪ್ರತಿನಿಧಿಗಳು ಸೋಮವಾರ ಭೇಟಿ ನೀಡಿ ಪ್ರಸಕ್ತ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದರು.
ಹೋಟೆಲ್ ಮಾಲೀಕರ ಸಮಸ್ಯೆ ಆಲಿಸಿದ ಡಿಕೆಶಿ ಈ ಸಂದರ್ಭದಲ್ಲಿ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಮಧುಕರ್ ಎಂ. ಶೆಟ್ಟಿ, ಎಂ.ವಿ.ರಾಘವೇಂದ್ರ ರಾವ್, ವಾಸುದೇವ ಅಡಿಗ, ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್, ಗಣೇಶ ರಾವ್, ಗಣೇಶ ಪೂಜಾರಿ, ಕೃಷ್ಣ ಮಹಾರಾಜ್ ಇದ್ದರು.
ಲಾಕ್ಡೌನ್ ಘೋಷಣೆ ನಂತರ ಇಂದಿನವರೆಗೆ ಕಳೆದ ನಾಲ್ಕು ತಿಂಗಳಲ್ಲಿ ಎದುರಾದ ಸಮಸ್ಯೆ, ಮುಚ್ಚಿದ ಹೋಟೆಲ್ಗಳು, ಸಂಕಷ್ಟಕ್ಕೀಡಾದ ಹೋಟೆಲ್ ಮಾಲೀಕರು ಹಾಗೂ ಕೆಲಸ ಕಳೆದುಕೊಂಡ ಕಾರ್ಮಿಕರ ವಿಚಾರವಾಗಿ ಡಿಕೆಶಿ ವಿಸ್ತೃತ ಮಾಹಿತಿ ಪಡೆದರು.
ಕೋವಿಡ್ ಆತಂಕದ ಸಂದರ್ಭದಲ್ಲಿ ಸರ್ಕಾರದಿಂದ ಸಿಕ್ಕ ಸೌಕರ್ಯಗಳು, ಲಭಿಸಿದ್ದ ಭರವಸೆಗಳು, ಈಡೇರಿದ್ದು ಎಷ್ಟು? ಸಮಸ್ಯೆಗೆ ಸರ್ಕಾರ ಹೇಗೆ ಸ್ಪಂದಿಸಿದೆ. ಹೋಟೆಲ್ ಉದ್ಯಮ ಸಂಕಷ್ಟದಲ್ಲಿದ್ದು, ಸರ್ಕಾರ ಎಷ್ಟರ ಮಟ್ಟಿಗೆ ನಿಮ್ಮ ಕೈಹಿಡಿದಿದೆ. ಉದ್ಯಮ ಮತ್ತೆ ಚೇತರಿಸಿಕೊಳ್ಳಲು ಇನ್ನೆಷ್ಟು ಕಾಲಾವಧಿ ಬೇಕು? ಪ್ರತಿಪಕ್ಷವಾಗಿ ಕಾಂಗ್ರೆಸ್ ನಿಮ್ಮ ಪರವಾಗಿ ಸರ್ಕಾರದ ಮೇಲೆ ಯಾವ ರೀತಿಯ ಒತ್ತಡ ಹೇರಲು ಸಾಧ್ಯ ಎಂಬ ವಿಚಾರವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಹೋಟೆಲ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆ, ಆಗುತ್ತಿರುವ ಆತಂಕ, ಉದ್ಯಮಕ್ಕೆ ಎದುರಾಗಿರುವ ಆರ್ಥಿಕ ಸಂಕಷ್ಟ, ಸರ್ಕಾರದ ಮುಂದಿಟ್ಟ ಬೇಡಿಕೆಗಳ ಕುರಿತು ಹೋಟೆಲ್ ಸಂಘದ ಮಾಲೀಕರು ಮಾಹಿತಿ ಒದಗಿಸಿ, ತಮ್ಮ ಪರ ಸರ್ಕಾರದ ಬಳಿ ಮಾತನಾಡುವಂತೆ ಮನವಿ ಮಾಡಿದರು.