ಕರ್ನಾಟಕ

karnataka

ETV Bharat / state

ಉಂಡ ಮನೆಗೆ ಕನ್ನ: ಕೋಟ್ಯಂತರ ಮೌಲ್ಯದ ವಜ್ರ, ಚಿನ್ನಾಭರಣ ಎಗರಿಸಿದ್ದ ಆರೋಪಿ 48ಗಂಟೆಯಲ್ಲೇ ಅರೆಸ್ಟ್​! - digital locker theft accused arrest

ಪೊಲೀಸರ ಬಳಿ ಭದ್ರವಾಗಿದ್ದ ದುಬಾರಿ ಬೆಲೆಯ ವಜ್ರ ಮತ್ತು ಚಿನ್ನಾಭರಣಗಳನ್ನು ಡಿಜಿಟಲ್ ಲಾಕರ್ ಸಮೇತ ಕಳ್ಳತನ ಮಾಡಿದ ಆರೋಪಿಯನ್ನ 48 ಗಂಟೆಗಳಲ್ಲೇ ಹೆಡೆಮುರಿ ಕಟ್ಟಲಾಗಿದೆ.

digital locker theft accused arrest
ಮನೆ ಮಾಲೀಕನಿಗೆ ದ್ರೋಹ ಬಗೆದ ಆರೋಪಿ 48 ಗಂಟೆಯಲ್ಲಿ ಅಂದರ್

By

Published : Oct 18, 2020, 10:56 PM IST

ಬೆಂಗಳೂರು: ಪೊಲೀಸರ ಬಳಿ ಭದ್ರವಾಗಿದ್ದ ದುಬಾರಿ ಬೆಲೆಯ ವಜ್ರ ಮತ್ತು ಚಿನ್ನಾಭರಣಗಳನ್ನು ಡಿಜಿಟಲ್ ಲಾಕರ್ ಸಮೇತ ಕಳ್ಳತನ ಮಾಡಿದ ಆರೋಪಿಯನ್ನ 48 ಗಂಟೆಗಳಲ್ಲಿ ಹಿಡಿಯುವಲ್ಲಿ ದಕ್ಷಿಣ ವಿಭಾಗದ ಜೆಪಿ ನಗರ ಠಾಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕೈಲಾಸ್ ದಾಸ್ ಬಂಧಿತ ಆರೋಪಿ. ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜೇಶ್ ಬಾಬು ಎಂಬುವರು ತಮ್ಮ ಮನೆ ಕೆಲಸಕ್ಕೆ ಪಶ್ಚಿಮ ಬಂಗಾಳ ಮೂಲದ ಕೈಲಾಸ್ ದಾಸ್ ಎಂಬಾತನನ್ನು ನೇಮಿಸಿಕೊಂಡು, ನೆಲಮಹಡಿಯಲ್ಲಿ ಒಂದು ರೂಮ್ ಸಹ ನೀಡಿದ್ದರು.

ಆದರೆ, ಇತ್ತೀಚಿಗೆ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಮಯದಲ್ಲೇ ಸ್ಕೆಚ್​ ಹಾಕಿದ ಕೈಲಾಸ್​, ಇದೇ ತಿಂಗಳ 9 ರಂದು ಮನೆಯ ಬೆಡ್ ರೂಮ್ ನಲ್ಲಿದ್ದ ನವೀಕೃತ ಭದ್ರತಾ ತಂತ್ರಾಂಶವುಳ್ಳ ಡಿಜಿಟಲ್ ಲಾಕರ್ ನಲ್ಲಿಟ್ಟಿದ್ದ ಸುಮಾರು 1 ಕೋಟಿ 30 ಲಕ್ಷ ಬೆಳೆಬಾಳುವ ವಜ್ರ ಮತ್ತು ಚಿನ್ನದ ಆಭರಣಗಳನ್ನು ಕಳವು ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ಲಾಕರ್ ಓಪನ್ ಆಗದ ಕಾರಣ, ಬೆಡ್​ ರೂಮ್​ನಿಂದ ಲಾಕರ್ ಅನ್ನು ತೆಗೆದುಕೊಂಡು ತನ್ನ ರೂಮ್​ನಲ್ಲಿ ಇಟ್ಟುಕೊಂಡಿದ್ದಾನೆ. ಇದಾದ ನಂತರ ಎರಡು ದಿನಗಳ ಕಾಲ ಅವರ ಮನೆಯಲ್ಲಿದ್ದು, ಕುಟುಂಬದ ಸದಸ್ಯರು ಇಲ್ಲದ ಸಂದರ್ಭದಲ್ಲಿ ಪರಾರಿಯಾಗಿದ್ದಾನೆ.

ಮನೆಯ ಮಾಲೀಕ ಅನುಮಾನಗೊಂಡು ಲಾಕರ್ ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದ್ದರಿಂದ ಜೆಪಿ ನಗರ ಠಾಣೆಗೆ ತೆರಳಿ ಅವರು ದೂರು ನೀಡಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿ ಆತನ ಬಗ್ಗೆ ಸ್ನೇಹಿತರು ಸಂಬಂಧಿಕರನ್ನು ವಿಚಾರಣೆ ಮಾಡಿದ್ದಾರೆ. ಅಲ್ಲದೆ, ಬಸ್​ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿ ಪೊಲೀಸರ ಗಮನವನ್ನು ಬೇರೆ ಕಡೆ ಸೆಳೆಯುವ ಉದ್ದೇಶದಿಂದ ಮೈಸೂರು ನಗರಕ್ಕೆ ಬಸ್​ನಲ್ಲಿ ತೆರಳಿ ಅಲ್ಲಿನ ರೂಮ್​ವೊಂದರಲ್ಲಿ ಸ್ಕ್ರೂ ಡ್ರೈವರ್ ಗಳಿಂದ ಡಿಜಿಟಲ್ ಲಾಕರ್ ಅನ್ನು ತೆರೆದು ವಜ್ರದ ಆಭರಣ ಮತ್ತು ಚಿನ್ನದ ಆಭರಣಗಳನ್ನು ಕದಿಯಲು ಪ್ರಯತ್ನಿಸಿದ್ದಾನೆ.

ಆದರೆ, ಲಾಕರ್ ತೆರೆಯಲು ವಿಫಲವಾಗಿದ್ದರಿಂದ ತನ್ನ ಸ್ವಂತ ಊರಿಗೆ ತೆಗೆದುಕೊಂಡು ಹೋಗಲು ತೀರ್ಮಾನಿಸಿ ಮೈಸೂರು ನಗರದಿಂದ ಬೆಂಗಳೂರಿಗೆ ಪ್ರಯಾಣಿಸಿ ಬಳಿಕ ಯಶವಂತಪುರ ರೈಲ್ವೆ ನಿಲ್ದಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾನೆ. ಈ‌ ಮಾಹಿತಿ ತಿಳಿದು ಪೊಲೀಸರು ಆತ ತಲುಪುವ ಮುಂಚೆಯೇ ವಿಮಾನದಲ್ಲಿ ಹೋಗಿ ಆರೋಪಿ ಸ್ವಾಗತಕ್ಕೆ ಕಾದಿದ್ದಾರೆ.

ಆದರೆ, ಅಲ್ಲಿಯೂ ಕೂಡ ಪೊಲೀಸರ ಕಣ್ತಪ್ಪಿಸಿ ರೈಲ್ವೆ ನಿಲ್ದಾಣದ ಬೇರೆ-ಬೇರೆ ಪ್ಲಾಟ್ಫಾರ್ಮ್ ನಿಂದ ಹೊರಗಡೆ ಹೋಗೋಕೆ ಮುಂದಾಗಿದ್ದ. ಇದನ್ನು ಮನಗಂಡು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಫ್ಲಾನ್ ಮಾಡಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಹಾಗೆ ಬಂಧಿತ‌ನಿಂದ ಲಾಕರ್ ಸಮೇತ 1 ಕೋಟಿ 30ಲಕ್ಷ ಮೌಲ್ಯದ ವಜ್ರದ ಹರಳಿರುವ 1,731 ಗ್ರಾಂ ತೂಕದ ಚಿನ್ನಾಭರಣ ಮತ್ತು ವಜ್ರದ ಆಭರಣ, 2,536 ಗ್ರಾಂ ಬೆಳ್ಳಿಯ ಕಾಮಧೇನು ವಿಗ್ರಹ, ನಗದು, ಪಾಸ್ ಪೋರ್ಟ್ ವಶಪಡಿಸಿಕೊಂಡು ತನಿಖೆ ‌ಮುಂದುವರೆಸಿದ್ದಾರೆ.

ABOUT THE AUTHOR

...view details