ಬೆಂಗಳೂರು: ಭಾರತವು ತಂತ್ರಜ್ಞಾನವನ್ನು ಅತ್ಯಂತ ವೇಗವಾಗಿ ಅಳವಡಿಸಿಕೊಂಡ ಪ್ರಮುಖ ರಾಷ್ಟ್ರವಾಗಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ನಗರದಲ್ಲಿಂದು ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆ (ಡಿಐಎ)ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಜಿಟಲ್ ಆರ್ಥಿಕತೆಯು 2014ರಲ್ಲಿ ಒಟ್ಟು ಜಿಡಿಪಿಯ ಶೇ.5 ರಷ್ಟು ಕೊಡುಗೆ ನೀಡಿದ್ದು, ಪ್ರಸ್ತುತ ಶೇ.11 ರಷ್ಟಾಗಿದೆ. ಅದನ್ನು 2026ರ ವೇಳೆಗೆ ಶೇ 20ಕ್ಕಿಂತ ಹೆಚ್ಚು ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಸಿಲಿಕಾನ್ ಸಿಟಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ಸ್ಟಾರ್ಟಪ್ ಹಾಗೂ ಹೊಸ ಇನ್ನೊವೇಷನ್‌ಗೆ ಎಪಿಕ್ ಸೆಂಟರ್ ಆಗಿದೆ. ಭಾರತ ಹೊಸ ಡಿಜಿಟಲ್ ಇನ್ನೋವೇಷನ್‌ನಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಪ್ರತಿಯೊಬ್ಬರು ಡಿಜಿಟಲ್ ಅವಕಾಶಗಳನ್ನ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದಾಗಿದೆ. ಸರ್ಕಾರ ಮತ್ತು ಜನರ ನಡುವೆ ನೇರ ಸಂಪರ್ಕವನ್ನು ಸಾಧಿಸಬಹುದಾಗಿದೆ ಎಂದು ಹೇಳಿದರು.
2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಡಿಜಿಟಲ್ ಭವಿಷ್ಯದ ಬಗ್ಗೆ ಮಾತನಾಡಿ, ಅವರ ಆಡಳಿತದ ದಶಕವನ್ನು ಟೆಕೇಡ್ ಎಂದು ಕರೆದಿದ್ದಾರೆ. ಡಿಜಿಟಲ್ ಕ್ರಾಂತಿಯಿಂದ ಭಾರತ ವೇಗವಾಗಿ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಆಗಿರುವ ಡಿಜಿಟಲ್ ಕ್ರಾಂತಿ ಬಗ್ಗೆ ಸಂಕ್ಷಿಪ್ತ ಅಧ್ಯಯನ ಯಾರಾದರೂ ನಡೆಸಬಹುದಾಗಿದೆ ಎಂದರು.