ಬೆಂಗಳೂರು: ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಪ್ರಮಾಣೀಕರಿಸಿ ನೀಡಲಾಗುವ ಜೀವಂತ ಪ್ರಮಾಣ ಪತ್ರ ನೀಡುವ ಸೇವೆಯನ್ನು ರಾಜ್ಯ ಸರ್ಕಾರ ಸರಳೀಕರಿಸಿ ಎಲ್ಲರಿಗೂ ಸುಗಮವಾದ ವ್ಯವಹಾರವನ್ನು ನಡೆಸಲು ಅನುಕೂಲ ಕಲ್ಪಿಸಿದೆ ಎಂದು ಖಜಾನೆ ಇಲಾಖೆ ಅಪರ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಖಜಾನೆ ಇಲಾಖೆ ಮತ್ತು ಭಾರತೀಯ ಅಂಚೆ ಇಲಾಖೆಯ ನಡುವೆ ಆಗಿರುವ ಒಪ್ಪಂದದಂತೆ ಜೀವಂತ ಪ್ರಮಾಣ ಪತ್ರವನ್ನು ಇ ವಿದ್ಯುನ್ಮಾನ ಆಡಳಿತ ಅಡಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಪಿಂಚಣಿದಾರರ ಮನೆ ಬಾಗಿಲಿಗೆ ಸೇವೆ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿದ್ದು, ಪ್ರತಿ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇನ್ನು ಮುಂದೆ ಜೀವಂತ ಪ್ರಮಾಣ ಪತ್ರಗಳನ್ನು ಡಿಜಿಟಲ್ ಆಗಿ (ಡಿಜಿಟಲ್ ಜೀವಂತ ಪ್ರಮಾಣ ಪತ್ರ) ಸಲ್ಲಿಸುವ ವ್ಯವಸ್ಥೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಒದಗಿಸುತ್ತದೆ. ರಾಜ್ಯ ಸರ್ಕಾರದ ಪಿಂಚಣಿದಾರರಿಗೆ ಈ ಸೇವೆ ವಿಸ್ತರಿಸಲು ಖಜಾನೆ ಇಲಾಖೆ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗಯೊಂದಿಗೆ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ. ಇ ಜೀವಂತ ಪ್ರಮಾಣ ಪತ್ರ ಪಡೆಯಲು ಪಿಂಚಣಿದಾರರು ತಮ್ಮ ಹೆಸರು, ಪಿಪಿಓ ಸಂಖ್ಯೆ, ಬ್ಯಾಂಕು ಖಾತೆಯ ವಿವರ, ವಿಳಾಸ, ಪಿನ್ ಕೋಡ್ ಆಧಾರ್ ಸಂಖ್ಯೆ, ಮೊಬೈಲು ಸಂಖ್ಯೆಯ ವಿವರಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಒದಗಿಸಬೇಕು ಎಂದರು.
ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ತಂತ್ರಾಂಶದಲ್ಲಿ ಮೇಲ್ಕಂಡ ವಿವರಗಳನ್ನು ಒದಗಿಸಿದ ನಂತರ ಕಾಗದ ರಹಿತ ಟಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ಸೃಜನೆತಾಗುತ್ತದೆ. ಇ-ಜೀವನ್ ಪ್ರಮಾಣ ಐಡಿಯನ್ನು ಪಿಂಚಣಿದಾರರಿಗೆ ಎಸ್.ಎಮ್.ಎಸ್. ಮೂಲಕ ಕಳುಹಿಸಲಾಗುವುದು, ಈ ಅಧಿಕೃತ ಸಂಖ್ಯೆಯ ನೆರವಿನಿಂದ ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.