ಬೆಂಗಳೂರು: ಹಿಜಾಬ್ ವಿಚಾರದ ಬೆನ್ನಲ್ಲೇ ರಾಜ್ಯದಲ್ಲಿ ಈಗ ಮತ್ತೊಂದು ವಿಷಯ ಭಾರಿ ಸುದ್ದಿಯಲ್ಲಿದೆ. ಈಗ ಹಲಾಲ್ ವಿಚಾರದ ಕುರಿತು, ಚರ್ಚೆ, ವಿವಾದಗಳು ಮುಂದುವರಿದಿವೆ. ಹಿಜಾಬ್ನಿಂದ ಆರಂಭವಾದ ಈ ವಿಷಯ ಮುಸ್ಲಿಂ ವ್ಯಾಪಾರಿಗಳನ್ನು ದೇವಸ್ಥಾನದ ಆವರಣದಲ್ಲಿ ಬ್ಯಾನ್ ಮಾಡುವುದು ಸೇರಿ ಈಗ ಹಲಾಲ್ಗೆ ಬಂದು ನಿಂತಿದೆ. ಸದ್ಯ ರಾಜ್ಯದಲ್ಲಿ ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಸಂಘಟನೆಗಳು ಮನವಿ ಮಾಡುತ್ತಿರುವುದು ಸಾಕಷ್ಟು ಚರ್ಚೆ ಆಗ್ತಿದೆ.
ಹಿಂದೂ ಕಾರ್ಯಕರ್ತರಿಂದ ಅಭಿಯಾನ: ಈಗ ನಗರದಲ್ಲೂ ಹಲಾಲ್ ಮಾಂಸ ತಿನ್ನದಂತೆ ಭಜರಂಗದಳದ ಕಾರ್ಯಕರ್ತರು ಪುನೀತ್ ಕೆರೆಹಳ್ಳಿ, ಪ್ರಶಾಂತ್ ಸಂಬರ್ಗಿ ನೇತೃತ್ವದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ಯುಗಾದಿ ಹಬ್ಬದ ಹೊಸ ತೊಡಕು ವಿಚಾರದಲ್ಲೂ ಸಾಕಷ್ಟು ಪೋಸ್ಟ್ಗಳನ್ನು ಹರಿ ಬಿಡಲಾಗುತ್ತಿದೆ. ಹಲಾಲ್ ಎಂಬುದು ಅವರ ದೇವರಿಗೆ ಮಾಂಸವನ್ನು ಅರ್ಪಣೆ ಮಾಡುವ ವಿಧಾನ. ಪ್ರಾಣಿ ವಧೆ ಮಾಡುವ ಪ್ರಕ್ರಿಯೆಯಲ್ಲಿ ಮಿದುಳಿನಿಂದ ಕೆಲ ವಿಷಕಾರಿ ರಾಸಾಯನಿಕಗಳು ಪ್ರಾಣಿಯ ದೇಹಕ್ಕೆ ಹರಿಯುತ್ತವೆ. ಈ ಮಾಂಸವನ್ನು ಸೇವಿಸಿದ ಮನುಷ್ಯನ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಹಲಾಲ್ ಮಾಂಸವನ್ನು ನಿಷೇಧಿಸಿ ಎಂದು ಅಭಿಯಾನ ಪ್ರಾರಂಭಿಸಲಾಗಿದೆ.
ಹಲಾಲ್ ಮಾಂಸ ತಿನ್ನದಂತೆ ಅಭಿಯಾನ ರಾಜ್ಯವನ್ನು ಹಲಾಲ್ ಮುಕ್ತಗೊಳಿಸಬೇಕಾಗಿದೆ: ಹಿಂದೂ ಜಾಗೃತಿ ಸಮಿತಿ ನಡೆಸುತ್ತಿರುವ ಹಲಾಲ್ ಬಹಿಷ್ಕಾರ ಹೋರಾಟಕ್ಕೆ ಶ್ರೀರಾಮಸೇನೆ ಬೆಂಬಲ ಸೂಚಿಸಿದೆ. ಈ ಕುರಿತು ಮಾತನಾಡಿರುವ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಭಾರತ ಮತ್ತು ರಾಜ್ಯವನ್ನು ಹಲಾಲ್ ಮುಕ್ತಗೊಳಿಸಬೇಕಾಗಿದೆ. ಎಲ್ಲ ಹಿಂದೂಗಳು ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ಈ ಹಿಂದೆ ಅಕ್ಬರ್, ಔರಂಗಜೇಬ್ ಹಿಂದೂಗಳ ಮೇಲೆ ತೆರಿಗೆ ವಿಧಿಸುತ್ತಿದ್ದರು. ಈಗ ಹಲಾಲ್ ಎಂಬ ವಿಚಾರವನ್ನು ಹೇರುತ್ತಿದ್ದಾರೆ. ಹಲಾಲ್ ಬೇಕಾದರೆ ಅವರು ಇರಿಸಿಕೊಳ್ಳಲಿ. ಆದರೆ, ಹಿಂದೂಗಳು ಹಲಾಲ್ ಪ್ರಮಾಣಪತ್ರ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ. ಹಿಂದೂಗಳಿಗೆ ಇದರ ಅಗತ್ಯವಿಲ್ಲ. ಪಿಎಫ್‌ಐ ಮತ್ತು ಎಸ್‌ಬಿಎಐ ಎಂಐಎಂನಂತಹ ಸಂಘಟನೆಗಳಿಗೆ ಇದರ ಹಣ ಹೋಗುತ್ತಿದೆ. ಹಲಾಲ್ ಸರ್ಟಿಫಿಕೇಟ್ ನೀಡುವುದು ದೊಡ್ಡ ಉದ್ಯಮವಾಗಿದೆ. ಇದು ದೇಶಕ್ಕೆ ಅಪಾಯಕಾರಿಯಾಗಲಿದೆ. ಆದ್ದರಿಂದ ಹಲಾಲ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯವನ್ನು ಹಲಾಲ್ ಮುಕ್ತಗೊಳಿಸಬೇಕಾಗಿದೆ ಎಂದ ಪ್ರಮೋದ್ ಮುತಾಲಿಕ್ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ನಡುವಿನ ವ್ಯತ್ಯಾಸ ಹೀಗಿದೆ: ಹಲಾಲ್ ಕಟ್ ಅಂದ್ರೆಮುಸ್ಲಿಂ ಧರ್ಮದ ಆಹಾರ ಕ್ರಮ. ಈ ನಿಯಮದಂತೆ ಬಲಿ ಕೊಡುವ ಪ್ರಾಣಿಯ ರಕ್ತ ನಾಳವನ್ನು ಕತ್ತರಿಸಲಾಗುತ್ತದೆ. ಇದರಿಂದ ರಕ್ತ ಪೂರ್ತಿಯಾಗಿ ಹೊರಬರುತ್ತದೆ. ನಂತರ ಶುದ್ಧ ಮಾಂಸ ಸಿಗುತ್ತದೆ. ಮೆಕ್ಕಾ ಕಡೆ ಮುಖ ಮಾಡಿ ಪ್ರಾಣಿಗಳನ್ನು ಕತ್ತರಿಸುವುದನ್ನು ಹಲಾಲ್ ಕಟ್ ಎಂದು ಕರೆಯುತ್ತಾರೆ. ಈ ರೀತಿಯಲ್ಲಿ ಪ್ರಾಣಿಗಳ ವಧೆ ಮಾಡದ ಶುದ್ಧವಿಲ್ಲದ ಆಹಾರ ಇಸ್ಲಾಂ ಧರ್ಮದಲ್ಲಿ ನಿಷಿದ್ಧವಾಗಿದೆ.
ಜಟ್ಕಾ ಕಟ್:ಇದರಲ್ಲಿ ಪ್ರಾಣಿಯ ವಧೆ ಒಂದೇ ಬಾರಿಗೆ ನಡೆಯುತ್ತದೆ. ಸಾವಿನಲ್ಲೂ ಸಹ ನೋವು ನೀಡದೆ ಪ್ರಾಣಿಯ ಬಲಿ ಕೊಡುವುದಕ್ಕೆ ಜಟ್ಕಾ ಕಟ್ ಎನ್ನುತ್ತಾರೆ. ಹಿಂದೂ ಧರ್ಮದಲ್ಲಿ ಹಿರಿಯರು ಪಾಲಿಸಿಕೊಂಡ ಪದ್ಧತಿ ಇದಾಗಿದೆ. ಜಟ್ಕಾ ಕಟ್ ಅಂದರೆ ದೈವ ಬಲಿ ಎಂದೂ ಕರೆಯಲಾಗುತ್ತದೆ. ಒಂದೇ ಏಟಿಗೆ ಪ್ರಾಣಿ ರುಂಡ, ಮುಂಡವನ್ನು ಬೇರ್ಪಡಿಸಲಾಗುತ್ತದೆ. ಯಾವುದೇ ಆಹಾರವನ್ನು ಸೇವಿಸುವ ಮೂದಲು ದೇವರಿಗೆ ನೈವೇದ್ಯ ಅರ್ಪಿಸಿ ತಿನ್ನುವುದನ್ನು ಪೂರ್ವಜರು ಕಲಿಸಿಕೊಟ್ಟ ಪ್ರಕ್ರಿಯೆ ಇದಾಗಿದ್ದು, ಇದನ್ನು ಹಿಂದೂಗಳು ಜಟ್ಕಾ ಕಟ್ ಅಂತಾ ಕರೆಯುತ್ತಾರೆ.
ಇದನ್ನೂ ಓದಿ:ರಷ್ಯಾ ದಾಳಿಗೆ ತತ್ತರಿಸಿ ₹40 ಲಕ್ಷಕ್ಕೂ ಅಧಿಕ ಉಕ್ರೇನಿಯನ್ನರ ಮಹಾವಲಸೆ: ವಿಶ್ವಸಂಸ್ಥೆ