ಕರ್ನಾಟಕ

karnataka

ETV Bharat / state

ಇಷ್ಟ ಬಂದಂತೆ ಆರ್‌ಟಿಪಿಸಿಆರ್ ಕಿಟ್ ಖರೀದಿಸುವಂತಿಲ್ಲ.. ಐಸಿಎಂಆರ್ ನಿಯಮ‌ ಹೇಳೋದೇನು ಗೊತ್ತಾ..?

ಒಂದು ಆರ್‌ಟಿಪಿಸಿಆರ್ ಕಿಟ್​​ನಲ್ಲಿ 100 ಜನರಿಗೆ ಕೋವಿಡ್ ಪರೀಕ್ಷೆ ನಡೆಸಬಹುದಾಗಿದೆ. ಮೊದಲ ಅಲೆ ವೇಳೆ ಪ್ರತಿ ಕಿಟ್​​ಗೆ 1.12 ಲಕ್ಷ ರೂ. ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಅಂದರೆ ಪ್ರತಿ ಒಂದು ಕೋವಿಡ್ ಟೆಸ್ಟ್​ಗೆ ಅಂದಾಜು 1,100 ರೂ. ವೆಚ್ಚವಾಗುತ್ತದೆ.

ಇಷ್ಟ ಬಂದಂತೆ ಆರ್‌ಟಿಪಿಸಿಆರ್ ಕಿಟ್ ಖರೀದಿಸುವಂತಿಲ್ಲ
ಇಷ್ಟ ಬಂದಂತೆ ಆರ್‌ಟಿಪಿಸಿಆರ್ ಕಿಟ್ ಖರೀದಿಸುವಂತಿಲ್ಲ

By

Published : May 19, 2021, 8:46 PM IST

ಬೆಂಗಳೂರು:ಕೋವಿಡ್-19 ರಾಜ್ಯಕ್ಕೆ ಕಾಲಿಟ್ಟಾಗಿನಿಂದ ಈವರೆಗೆ ರಾಜ್ಯದಲ್ಲಿ 2.34 ಕೋಟಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗಿದ್ದು, ಇದೀಗ ಹೊಸದಾಗಿ 37 ಲಕ್ಷ ಆರ್‌ಟಿಪಿಸಿಆರ್ ಕಿಟ್ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಐಸಿಎಂಆರ್​ನಿಂದ ಮೌಲ್ಯೀಕರಣಕ್ಕೊಳಗಾದ ಕಿಟ್​​​ಗಳನ್ನೇ ಬಳಸಬೇಕಿದ್ದು ಆ ನಿಟ್ಟಿನಲ್ಲಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

2020ರ ಮಾಚ್ 8ರಂದು ರಾಜ್ಯದಲ್ಲಿ ಮೊದಲ ಕೋವಿಡ್-19 ಪ್ರಕರಣ ದೃಢಪಟ್ಟಿತ್ತು, ಅಲ್ಲಿಯವರೆಗೂ ಅಷ್ಟೇನು ಗಂಭೀರವಾಗಿ ಕೊರೊನಾ ತಪಾಸಣೆ ಮಾಡಿದ ಆರೋಗ್ಯ ಇಲಾಖೆ ನಂತರ ಕೋವಿಡ್ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇಲ್ಲಿಯವರೆಗೂ ಒಟ್ಟು 2.34 ಕೋಟಿ ಆರ್‌ಟಿಪಿಸಿಆರ್ ಮತ್ತು 47.5 ಲಕ್ಷ ಆಂಟಿಜೆನ್ ಟೆಸ್ಟ್ ಸೇರಿ ಒಟ್ಟು 2.81 ಕೋಟಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಅದರಲ್ಲಿ 23 ಲಕ್ಷ ಪಾಸಿಟಿವ್ ಕೇಸ್ ದೃಢಪಟ್ಟಿವೆ.

ಐಸಿಎಂಆರ್​ನ ಮಾರ್ಗಸೂಚಿಯಂತೆ ಗುಣಮಟ್ಟ ಹೊಂದಿದ ಆರ್‌ಟಿಪಿಸಿಆರ್ ಕಿಟ್​​ಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕಿದೆ. ಅದರಂತೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಆರ್‌ಟಿಪಿಸಿಆರ್ ಕಿಟ್​​​ಗಳು ಹಾಗೂ ಆಂಟಿಜೆನ್ ಕಿಟ್​​​ಗಳ ಖರೀದಿ ಮಾಡುತ್ತಾ ಬರುತ್ತಿದೆ. ಈವರೆಗೂ ಆರ್‌ಟಿಪಿಸಿಆರ್ ಕಿಟ್​​​ಗಳ ಬಗ್ಗೆ ಯಾವುದೇ ಲೋಪದೋಷ ದೃಢಪಟ್ಟಿಲ್ಲ, ಅಷ್ಟಾಗಿ ಆರೋಪಗಳೂ ಕೇಳಿ ಬಂದಿಲ್ಲ. ಆದರೆ, ಆಂಟಿಜೆನ್ ಕಿಟ್​ಗಳಲ್ಲಿ ಆರಂಭದಿಂದಲೂ ಆಗಾಗ ದೋಷಗಳು ಕೇಳುತ್ತಲೇ ಇದೆ.

ಆಂಟಿಜೆನ್ ಟೆಸ್ಟ್ ಆರಂಭಿಸಿದ್ದ ಮೊದಲ ಬಾರಿಯಲ್ಲೇ ಲೋಪ ಕಂಡ ಕಾರಣಕ್ಕೆ ಕೆಲ ದಿನ ಟೆಸ್ಟ್ ನಿಲ್ಲಿಸಲಾಗಿತ್ತು, ಚೀನಾದಿಂದ ತರಿಸಿದ್ದ ಕಿಟ್​ಗಳನ್ನು ವಾಪಸ್ ಕಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕಾಗಿದ್ದ ಅನಿವಾರ್ಯತೆ ಹಾಗೂ ತ್ವರಿತ ಫಲಿತಾಂಶದ ಅಗತ್ಯತೆ ಕಾರಣಕ್ಕೆ ಸುಧಾರಿತ ಆಂಟಿಜೆನ್ ಕಿಟ್​​ಗಳನ್ನು ತರಿಸಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

ಆರ್​ಟಿಪಿಸಿಆರ್ ಖರೀದಿಗೆ ಜಾಗತಿಕ ಟೆಂಡರ್​

ಸದ್ಯ ರಾಜ್ಯದಲ್ಲಿ ಈಗ 10.5 ಲಕ್ಷ ಆಂಟಿಜೆನ್ ಕಿಟ್ ಲಭ್ಯವಿದ್ದು, ಹೆಚ್ಚುವರಿ ಕಿಟ್ ಬರುವವರೆಗೂ ಪ್ರತಿ ದಿನ 50 ಸಾವಿರ ಬಳಕೆ ಮಾಡಬಹುದಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆದರೆ ಎಷ್ಟು ಸಂಖ್ಯೆಯ ಆರ್‌ಟಿಪಿಸಿಆರ್ ಕಿಟ್ ದಾಸ್ತಾನಿದೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ಆದರೆ, ಹೊಸದಾಗಿ 37 ಲಕ್ಷ ಆರ್‌ಟಿಪಿಸಿಆರ್ ಕಿಟ್​​ಗಳ ಖರೀದಿಗೆ‌ ಸೂಚನೆ ನೀಡಿರುವುದಾಗಿ ತಿಳಿಸಿದೆ. ಜಾಗತಿಕ ಟೆಂಡರ್ ಕರೆದು ಆರ್‌ಟಿಪಿಸಿಆರ್ ಕಿಟ್ ಖರೀದಿ ಮಾಡಲಾಗುತ್ತದೆ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದ್ದಾರೆ.

ಐಸಿಎಂಆರ್ ನಿಯಮ‌ ಹೇಳೋದೇನು

ಒಂದು ಆರ್‌ಟಿಪಿಸಿಆರ್ ಕಿಟ್​​ನಲ್ಲಿ 100 ಜನರಿಗೆ ಕೋವಿಡ್ ಪರೀಕ್ಷೆ ನಡೆಸಬಹುದಾಗಿದೆ. ಮೊದಲ ಅಲೆ ವೇಳೆ ಪ್ರತಿ ಕಿಟ್​​ಗೆ 1.12 ಲಕ್ಷ ರೂ. ನೀಡಲಾಗಿತ್ತು ಎಂದು ತಿಳಿದುಬಂದಿದೆ. ಅಂದರೆ, ಪ್ರತಿ ಒಂದು ಕೋವಿಡ್ ಟೆಸ್ಟ್​ಗೆ ಅಂದಾಜು 1,100 ರೂ. ವೆಚ್ಚವಾಗುತ್ತದೆ. ಆದರೆ ಇದು ಕೋವಿಡ್​​​ನ ಆರಂಭಿಕ ಸಂದರ್ಭದಲ್ಲಿ ಇದ್ದ ದರವಾಗಿದ್ದು, ನಂತರ 550 ರೂ.ಗಳಂತೆ ಖರೀದಿ ಮಾಡಲಾಗಿತ್ತು ಈಗ ಮತ್ತೆ ಪರಿಷ್ಕರಣೆ ಆಗಿರಲಿದೆ, ಆದರೆ ಹೊಸ ದರದ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ.

ಗುಣಮಟ್ಟದ ಕಿಟ್​​ಗಳಿಗೆ ಮಾತ್ರ ಮಣೆ

ಸದ್ಯ ಮಾರುಕಟ್ಟೆಯಲ್ಲಿ ಈಗ 100-1,100 ರೂ. ವರೆಗೂ ಆರ್‌ಟಿಪಿಸಿಆರ್ ಕಿಟ್​​ಗಳ ಲಭ್ಯವಿದೆ ಆದರೆ ಐಸಿಎಂಆರ್ ಮಾನದಂಡದಂತೆ ಗುಣಮಟ್ಟ ಹೊಂದಿದ ಕಿಟ್​​ಗಳನ್ನು ಮಾತ್ರವೇ ಆರೋಗ್ಯ ಇಲಾಖೆ ಖರೀದಿ ಮಾಡಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಕಿಟ್​​ಗಳ ತಪಾಸಣೆ ನಡೆಸಲಾಗುತ್ತದೆ ಹಾಗಾಗಿ ಆರೋಗ್ಯ ಇಲಾಖೆ ಅಡಿ ನಡೆಯುವ ಕಿಟ್ ಖರೀದಿ ಪ್ರಕ್ರಿಯೆಯಲ್ಲಿ ಐಸಿಎಂಆರ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ ಹಾಗಾಗಿ ಗುಣಮಟ್ಟದ ಕಿಟ್​​​​ಗಳನ್ನೇ ಬಳಕೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್​ಗಳು ಕೂಡ ಕೋವಿಡ್ ತಪಾಸಣೆ ಮಾಡುತ್ತಿವೆ. ಆದರೆ, ಇವುಗಳಲ್ಲಿ ಕೆಲವು ಕಡೆ ಕಡಿಮೆ ಗುಣಮಟ್ಟದ ಕಿಟ್ ಬಳಕೆ ಮಾಡುತ್ತಿರುವ ಆರೋಪ ಕೇಳಿಬಂದರೂ ಅದು ತೀರಾ ವಿರಳವಾಗಿದೆ. ಬಹುತೇಕ ಖಾಸಗಿ ಆಸ್ಪತ್ರೆ ಮತ್ತು ಲ್ಯಾಬ್​ಗಳು ಪ್ರತಿಷ್ಠಿತ ವ್ಯಕ್ತಿಗಳಿಗೆ ಸೇರಿದ್ದು ಕಳಪೆ ಗುಣಮಟ್ಟದ ಕಿಟ್​​​ನಿಂದ ಅಪಖ್ಯಾತಿ ಬರಲಿದೆ ಎನ್ನುವ ಕಾರಣಕ್ಕೆ ಬಹುತೇಕ ಗುಣಮಟ್ಟದ ಕಿಟ್ ಬಳಕೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಐಸಿಎಂಆರ್ ನಿಯಮ‌ ಹೇಳೋದೇನು
ಆಂಟಿಜೆನ್ ಟೆಸ್ಟ್​​ನಲ್ಲಿ ಗೊಂದಲ

ಆರ್‌ಟಿಪಿಸಿಆರ್ ಮತ್ತು ಆಂಟಿಜೆನ್ ಟೆಸ್ಟ್​​ನಲ್ಲಿ ಗೊಂದಲ ಇರುವುದು ಆಂಟಿಜೆನ್ ಟೆಸ್ಟ್​​ನಲ್ಲಿ ಮಾತ್ರ. ಕೆಲವು ಕಡೆ ಆಂಟಿಜೆನ್ ಟೆಸ್ಟ್ ನೆಗಟಿವ್ ಬಂದರೆ ಆರ್‌ಟಿಪಿಸಿಆರ್ ಪಾಸಿಟಿವ್ ಬಂದಿರುತ್ತದೆ, ತಕ್ಷಣಕ್ಕೆ ಫಲಿತಾಂಶ ಬೇಕು ಎನ್ನುವುದು ಒಂದು ಕಾರಣವಾದರೆ ಮಾಸ್ ಟೆಸ್ಟ್ ಮಾಡಬೇಕಾದಾಗ ಆಂಟಿಜೆನ್ ಟೆಸ್ಟ್ ಮಾಡಲಾಗುತ್ತದೆ, 5 ನಿಮಿಷದಲ್ಲೇ ಫಲಿತಾಂಶ ಬರುವ ಕಾರಣಕ್ಕೆ ಇದಕ್ಕೆ ಆದ್ಯತೆ ನೀಡಲಾಗಿದೆ. ಆದರೆ, ಇದರಲ್ಲಿ ಕೆಲವೊಮ್ಮೆ ಗೊಂದಲ ಸೃಷ್ಟಿಯಾಗುತ್ತಿರುವ ಕಾರಣ, ಆಂಟಿಜೆನ್ ಪರೀಕ್ಷೆ ನಂತರ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ.

ನಕಲಿ ಫಲಿತಾಂಶ

ಇನ್ನು ಕೋವಿಡ್ ಸಾಂಕ್ರಾಮಿಕವನ್ನು ದುರುಪಯೋಗಕ್ಕೆ ಬಳಸಿಕೊಳ್ಳುತ್ತಿರುವ ಕೆಲವರು, ಕೋವಿಡ್ ಮಾದರಿ ಸಂಗ್ರಹ ಮಾಡುವವರು ಮತ್ತು ಲ್ಯಾಬ್ ನವರನ್ನು ಬುಕ್ ಮಾಡಿಕೊಂಡು ನಕಲಿ ಪಾಸಿಟಿವ್ ಅಥವಾ ನೆಗಟಿವ್ ವರದಿ ನೀಡುತ್ತಿದ್ದಾರೆ. ಮಾದರಿಯನ್ನು ಸಂಗ್ರಹ ಮಾಡದೆಯೇ ವರದಿಯನ್ನು ಕೊಡಲಾಗುತ್ತಿದೆ. ಇದರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಇಲ್ಲಿ ಕಿಟ್​​ಗಳ ಗುಣಮಟ್ಟದ ಪ್ರಶ್ನೆ ಇದುರಾಗಿಲ್ಲ, ವರದಿಗಳ ನೀಡಿಕೆಯಲ್ಲಿ ಅಕ್ರಮವೆಸಗಲಾಗುತ್ತಿದೆ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಆರ್‌ಟಿಪಿಸಿಆರ್ ನೆಗೆಟಿವ್, ಸಿಟಿ ಸ್ಕ್ಯಾನ್ ಪಾಸಿಟಿವ್

ಇನ್ನು ರೋಗ ಲಕ್ಷಣ ಇರುವವರ ಕೋವಿಡ್ ಟೆಸ್ಟ್ ನೆಗೆಟಿವ್ ಬರುತ್ತಿದೆ. ಮೊದಲ ಅಲೆಯಲ್ಲಿ ಇದರ ಪ್ರಮಾಣ ತೀರಾ ವಿರಳವಾಗಿತ್ತು ಆದರೆ 2ನೇ ಅಲೆಯಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಕಾರಣ ಸೋಂಕು ಅತಿ ಬೇಗ ಗಂಟಲು ದಾಟಿ ಶ್ವಾಸಕೋಶ ಸೇರಿಕೊಳ್ಳುತ್ತಿರುವುದಾಗಿದೆ. ಹಾಗಾಗಿಯೇ ಈಗ ರೋಗ ಲಕ್ಷಣವಿದ್ದ ಕೆಲವರಿಗೆ ಕೋವಿಡ್ ನೆಗೆಟಿವ್ ವರದಿ ಬಂದರೆ ಅವರಿಗೆ ಸಿಟಿ ಸ್ಕ್ಯಾನ್ ಮಾಡಿಸಲು ಶಿಫಾರಸು ಮಾಡಲಾಗುತ್ತಿದೆ.‌

ಸಿಟಿ ಸ್ಕ್ಯಾನ್​​​​ನಲ್ಲಿ ಶ್ವಾಸಕೋಶಕ್ಕೆ ಎಷ್ಟು ಹಾನಿಯಾಗಿದೆ ಎನ್ನುವ ಆಧಾರದಲ್ಲಿ ಸೋಂಕು ತಗುಲಿರುವ ಕುರಿತು ವರದಿ ನೀಡಲಾಗುತ್ತದೆ, ವಿಶೇಷವಾಗಿ 2021ರ ಏಪ್ರಿಲ್ ಮೇ ತಿಂಗಳಿನಲ್ಲಿ ಸಿಟಿ ಸ್ಕ್ಯಾನ್ ಮೂಲಕ ಕೊರೊನಾ ಸೋಂಕು ಪತ್ತೆ ಮಾಡುತ್ತಿರುವ ಪ್ರಕರಣ ಹೆಚ್ಚಾಗಿವೆ. ಹೀಗಾಗಿ ಕೋವಿಡ್ ನೆಗೆಟಿವ್ ವರದಿ ಬಂದರೂ ಸಿಟಿ ಸ್ಕ್ಯಾನ್ ನಲ್ಲಿ ಸೋಂಕು ಇರುವುದು ಕಂಡು ಬಂದಿಲ್ಲ ಅಂತಹವರನ್ನು ಕೋವಿಡ್ ಸೋಂಕಿತರೆಂದು ಪರಿಗಣಿಸಿ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದಾರೆ.

ಸಿಟಿ ಸ್ಕ್ಯಾನ್ ದರ ನಿಗದಿ

ರೋಗ ಲಕ್ಷಣ ಇದ್ದರೂ ಆರ್‌ಟಿಪಿಸಿಆರ್ ಟೆಸ್ಟ್​ನಲ್ಲಿ ನೆಗಟಿವ್ ವರದಿ ಬರುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಸಿಟಿ ಸ್ಕ್ಯಾನ್​​ಗೆ ಶಿಫಾರಸು ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಖಾಸಗಿ ಆಸ್ಪತ್ರೆ, ಲ್ಯಾಬ್​ಗಳಲ್ಲಿ 5-8 ಸಾವಿರ ದರ ವಿಧಿಸುವ ಕಾರಣಕ್ಕೆ ಬಡವರಿಗೆ ತೊಂದರೆಯಾಗುತ್ತಿತ್ತು ಇದನ್ನು ಪರಿಗಣಿಸಿದ ಸರ್ಕಾರ ಸಿಟಿ ಸ್ಕ್ಯಾನ್​ಗೆ ದರ ನಿಗದಿಪಡಿಸಿದೆ. 1,500 ರೂ.‌ದರ ನಿಗದಿಪಡಿಸಿ ನಂತರ 2,500ಕ್ಕೆ ಮಾರ್ಪಡಿಸಿದೆ.

ಬಡವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸರ್ಕಾರವೇ ಸಿಟಿ ಸ್ಕ್ಯಾನ್ ದರ ನಿಗದಿ ಮಾಡಿದ್ದು ಹೆಚ್ಚು ಶುಲ್ಕ ಪಡೆದರೆ ಅಂತಹ ಆಸ್ಪತ್ರೆ, ಲ್ಯಾಬ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಕಿಟ್​​ಗಳ ಮೌಲ್ಯಮಾಪನ

ದೇಶದಲ್ಲಿ ಆರ್‌ಟಿ-ಪಿಸಿಆರ್‌ಗಾಗಿ ಕಿಟ್‌ಗಳ ಮೌಲ್ಯಮಾಪನ ಕಡ್ಡಾಯವಾಗಿದೆ. ಕಿಟ್​​​ಗಳ ಉತ್ಪಾಕರು ಅಥವಾ ಪೂರೈಕೆದಾರರು ಕಿಟ್​​ಗಳ ಮಾದರಿಯನ್ನು ಮೌಲ್ಯಮಾಪನ ಮಾಡಿಸಬೇಕಾಗಲಿದೆ. ಐಸಿಎಂಆರ್ ಅಂಗೀಕರಿಸಿದ ದೇಶದ 24 ಸಂಸ್ಥೆಗಳಲ್ಲಿ ಕಿಟ್ ಮಾದರಿ ನೀಡಿ ಕಿಟ್ ಬ್ಯಾಚ್​ನ ಮೌಲ್ಯಮಾಪನ ಮಾಡಿಸಿ ಪ್ರಮಾಣ ಪತ್ರ ಪಡೆಯಬೇಕು, ಬೆಂಗಳೂರಿನಲ್ಲಿಯೂ ಅಂತಹ ಇಂದು ಕೇಂದ್ರವಿದೆ. ಮೌಲ್ಯಮಾಪನಕ್ಕೊಳಗಾಗಿ ಅಂಗೀಕರಿಸಲ್ಪಟ್ಟ ಬ್ಯಾಚ್​​ಗಳ ಕಿಟ್​​​ಗಳನ್ನು ಮಾತ್ರವೇ ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆ, ಲ್ಯಾಬ್​ಗಳು ಖರೀದಿಸಬೇಕಿದೆ. ಇದನ್ನು ಐಸಿಎಂಆರ್ ಪರಿಶೀಲನೆ ನಡೆಸುತ್ತಿರುತ್ತದೆ ಎಂದು ಐಸಿಎಂಆರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details