ಬೆಂಗಳೂರು : ಬಿಜೆಪಿಯವರು ಬ್ಲ್ಯಾಕ್ಮೇಲ್ ಮಾಡಿಸಿಕೊಳ್ಳುವಂತ ಕೆಲಸ ಮಾಡಿದ್ದಾರಾ ಎಂದು ಕೈಗಾರಿಕ ಸಚಿವ ಎಂ ಬಿ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ಬಿಜೆಪಿಗರನ್ನು ಕಾಂಗ್ರೆಸ್ ಬ್ಲ್ಯಾಕ್ಮೇಲ್ ಮಾಡುತ್ತಿದೆ ಎಂಬ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಹಾಗಾದರೆ ಬಿಜೆಪಿಯವರು ಬ್ಲ್ಯಾಕ್ಮೇಲ್ಗೆ ಒಳಗಾಗುವಂತ ಕೆಲಸ ಮಾಡಿದ್ದಾರೆ ಅಂತಾಯ್ತಲ್ಲ. ಬ್ಲ್ಯಾಕ್ ಮೇಲ್ ಆಗುವಂತ ಕೆಲಸ ಮಾಡಿದ್ದರೆ, ನೀವು ಬ್ಲ್ಯಾಕ್ ಮೇಲ್ ಆಗುತ್ತೀರ. ಸದ್ಯ ಈಗಲಾದರೂ ಸತ್ಯ ಹೊರಬಂದಿದೆ. ಯಾವ ತರದ ಬ್ಲ್ಯಾಕ್ಮೇಲ್ ನಮಗಂತೂ ಗೊತ್ತಿಲ್ಲ. ಏನು ಬ್ಲ್ಯಾಕ್ ಮೇಲ್ ಅದು. ಯಾವ ರೀತಿ ಬ್ಲ್ಯಾಕ್ ಮೇಲ್?. ಏನು ಲೂಟಿ ಹೊಡೆದ ಬ್ಲ್ಯಾಕ್ ಮೇಲಾ?. ಬೇರೆ ಬ್ಲ್ಯಾಕ್ ಮೇಲಾ?. ನನಗೆ ಗೊತ್ತಿಲ್ಲ. ಹೇಳಿದವರನ್ನೇ ಕೇಳಬೇಕು. ಏನು ಬ್ಲ್ಯಾಕ್ ಮೇಲ್ ಅಂತ ಕೇಳಿ ಅವರಿಗೆ. ಕೇಳಿ ನನಗೂ ಹೇಳಿ, ನನಗೂ ಗೊತ್ತಾಗಬೇಕಿದೆ ಎಂದು ಕುಟುಕಿದರು.
ಕಾಂಗ್ರೆಸ್ಗೆ ಲಿಂಗಾಯತ ಮುಖಂಡರು ಬರುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಕೇವಲ ಲಿಂಗಾಯತ ನಾಯಕರು ಮಾತ್ರವಲ್ಲ. ಎಲ್ಲ ಸಮುದಾಯಗಳ ಮುಖಂಡರು ಕೂಡ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮುಳುಗಿದ ಹಡಗು. ಸ್ವಾಭಾವಿಕವಾಗಿ ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ಸಮುದಾಯ, ದಲಿತ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ತಿಳಿಸಿದರು.