ಬೆಂಗಳೂರು:ಚಿನ್ನದ ಸಾಲ ನೀಡುವ ದೇಶದ ಅತಿದೊಡ್ಡ ಕಂಪನಿಯಾಗಿರುವ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಘಟಕವಾಗಿರುವ ಮುತ್ತೂಟ್ ಎಂ. ಜಾರ್ಜ್ ಫೌಂಡೇಷನ್ ಡಯಾಲಿಸಿಸ್ ನೆರವು ಯೋಜನೆಯನ್ನು ಕರ್ನಾಟಕದಲ್ಲಿ ವಿಸ್ತರಿಸಿದೆ.
ಡಯಾಲಿಸಿಸ್ ನೆರವು ಒದಗಿಸಲು ಕಂಪನಿಯು ಬೆಂಗಳೂರಿನ ಸರ್ಕಾರಿಯೇತರ ಸ್ವಯಂಸೇವಾ ಸಂಸ್ಥೆಯಾಗಿರುವ (ಎನ್‍ಜಿಒ) ಬೆಂಗಳೂರು ಕಿಡ್ನಿ ಫೌಂಡೇಷನ್ (ಬಿಕೆಎಫ್) ಜೊತೆ ಒಪ್ಪಂದ ಮಾಡಿಕೊಂಡಿದೆ.
ನಗರದಲ್ಲಿರುವ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತ ಒಪ್ಪಂದದ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಮುತ್ತೂಟ್ ಗ್ರೂಪ್‍ನ ಕಾರ್ಯ ನಿರ್ವಾಹಕ ನಿರ್ದೆಶಕ ಜಾರ್ಜ್ ಎಂ. ಅಲೆಕ್ಸಾಂಡರ್ ಮತ್ತು ಬೆಂಗಳೂರು ಕಿಡ್ನಿ ಫೌಂಡೇಷನ್ ಟ್ರಸ್ಟಿ ಕಾರ್ತಿಕ್ ಶ್ರೀರಾಂ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಮುತ್ತೂಟ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್, ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಥಾಮಸ್ ಮುತ್ತೂಟ್ ಮತ್ತು ಸಿಎಸ್‍ಆರ್ ಸಮಿತಿಯ ಸದಸ್ಯರು ವಿಡಿಯೊ ಕಾನ್ಫರೆನ್ಸ್ ಮೂಲಕ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೂತ್ರಪಿಂಡಗಳ ವೈಫಲ್ಯದಿಂದ ಬಳಲುವವರ ಬಗ್ಗೆ ಕಾಳಜಿ ವಹಿಸಲು ಮತ್ತು ಅವರಿಗೆ ನೆರವು ಒದಗಿಸುವ ಕಾರ್ಯಕ್ರಮಗಳಲ್ಲಿ ಮುತ್ತೂಟ್ ಎಂ. ಜಾರ್ಜ್ ಫೌಂಡೇಷನ್ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿದೆ. ಮೂತ್ರಪಿಂಡಗಳ ವೈಫಲ್ಯದಿಂದ ಬಳಲುವವರ ಚಿಕಿತ್ಸೆ ಮತ್ತು ಡಯಾಲಿಸಿಸ್‍ಗಾಗಿ ಕಂಪನಿಯು ಪ್ರತಿವರ್ಷ ಗಮನಾರ್ಹ ಮೊತ್ತವನ್ನು ಒದಗಿಸುತ್ತಿದೆ. ಇದುವರೆಗೆ ಕಂಪನಿಯು 2 ಲಕ್ಷ ಡಯಾಲಿಸಿಸ್‍ಗಳಿಗೆ ನೆರವು ಒದಗಿಸಿದೆ.
ಒಪ್ಪಂದಕ್ಕೆ ಸಹಿ ಹಾಕಿ ಬಳಿಕ ಮಾತನಾಡಿದ ಮುತ್ತೂಟ್ ಫೈನಾನ್ಸ್ ಲಿಮಿಟೆಡ್‍ನ ಕಾರ್ಯ ನಿರ್ವಾಹಕ ನಿರ್ದೇಶಕ ಜಾರ್ಜ್ ಎಂ. ಅಲೆಕ್ಸಾಂಡರ್ ಅವರು, ಪ್ರತಿವರ್ಷ ಭಾರತದಲ್ಲಿ ಡಯಾಲಿಸಿಸ್‍ಗೆ ಒಳಗಾಗುವವರ ಸಂಖ್ಯೆಯು ಶೇ 10ರಿಂದ ಶೇ 15ರಷ್ಟು ಏರಿಕೆಯಾಗುತ್ತಿದೆ. ಬಿಕೆಎಫ್ ಜೊತೆಗಿನ ನಮ್ಮ ಸಹಯೋಗವು ಹಣಕಾಸು ನೆರವಿನಿಂದ ವಂಚಿತರಾದವರಿಗೆ ಹೆಚ್ಚುವರಿ ಕಾಳಜಿ ಮತ್ತು ನಿರಾಳತೆ ಒದಗಿಸಲಿದೆ ಎನ್ನುವುದು ನಮ್ಮ ನಂಬಿಕೆಯಾಗಿದೆ ಎಂದರು.
ನಮ್ಮ ವಿವಿಧ ಸಿಎಸ್‍ಆರ್ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ನಾವು (ಮುತ್ತೂಟ್ ಫೈನಾನ್ಸ್) ಬದ್ಧರಾಗಿದ್ದೇವೆ. ನಾವು ಸೇವೆ ಸಲ್ಲಿಸುತ್ತಿರುವ ಸಮುದಾಯಗಳ ಜೀವನದ ಗುಣಮಟ್ಟ ಸುಧಾರಿಸುವ ದೂರದೃಷ್ಟಿಯೊಂದಿಗೆ ಮುಂಬರುವ ದಿನಗಳಲ್ಲಿಯೂ ನಾವು ನಮ್ಮ ಸಮಾಜಕ್ಕೆ ಕೊಡುಗೆ ನೀಡುವ ನಮ್ಮ ಬದ್ಧತೆ ಮುಂದುವರೆಸುತ್ತೇವೆ ಎಂದು ಅವರು ಹೇಳಿದ್ದಾರೆ.