ಬೆಂಗಳೂರು: ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಇದೇ ತಿಂಗಳಿಂದ ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಡಿ.ಎಸ್.ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ತಿಂಗಳ 23 ರಂದು ಟೆಂಡರ್‌ಗೆ ಕಡೇ ದಿನ. ತಿಂಗಳಾಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ನಾಲ್ಕು ವಿಭಾಗಗಳಲ್ಲಿ ಡಯಾಲಿಸಿಸ್ ಯಂತ್ರಗಳು ಕಾರ್ಯಾರಂಭಿಸಲಿವೆ ಎಂದರು.
ಯಾವುದೇ ಸಮಸ್ಯೆ ಉಂಟಾದಾಗ ಡಯಾಲಿಸಿಸ್ ಯಂತ್ರಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸಲು ಇಲ್ಲವೇ, ತಾಂತ್ರಿಕ ಸಮಸ್ಯೆಗಳಿದ್ದರೆ ಬದಲಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಸ್ಕಾನ್ ಇ ಸಂಜೀವಿನಿ ಸಂಸ್ಥೆಯವರು ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ. ರೋಗಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ತರೀಕೆರೆಯೂ ಸೇರಿದಂತೆ ಹಲವೆಡೆ ಉಂಟಾದ ಸಮಸ್ಯೆಗಳನ್ನು ಸರಿಪಡಿಸಲು ಕ್ರಮವಾಗಿದೆ. ತರೀಕೆರೆಯಲ್ಲಿ ನಾಲ್ಕು ಡಯಾಲಿಸಿಸ್ ಯಂತ್ರಗಳ ಪೈಕಿ ಒಂದು ಯಂತ್ರ ಮಾತ್ರ ಸ್ಥಗಿತಗೊಂಡಿದ್ದು, ಉಳಿದ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಕೆಟ್ಟಿರುವ ಯಂತ್ರವನ್ನು ಸರಿಪಡಿಸಲು ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗೆ ಸೂಚಿಸಲಾಗಿದೆ. ಈ ಖಾಸಗಿ ಗುತ್ತಿಗೆ ಸಂಸ್ಥೆಯು ನಿಯಮಿತವಾಗಿ ರೋಗಿಗಳ ಡಯಾಲಿಸಿಸ್ ಮಾಡಲೇಬೇಕು ಎಂದು ನಿರ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಿಯಾದರೂ ಡಯಾಲಿಸಿಸ್ ಯಂತ್ರದ ಸಮಸ್ಯೆ ಎದುರಾದರೆ ಸರಿಪಡಿಸಲು ಕೂಡಲೇ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಶಾಸಕ ಸೋಮನಗೌಡ ಬಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು 263 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಂಘ-ಸಂಸ್ಥೆಗಳು, ದಾನಿಗಳು ಉಚಿತವಾಗಿ ಆಂಬ್ಯುಲೆನ್ಸ್ ನೀಡುತ್ತಾರೆ. ಆದರೆ, ಅವುಗಳ ನಿರ್ವಹಣೆ ತುಸು ಕಷ್ಟಕರವಾಗಿದೆ ಎಂದರು.