ಬೆಂಗಳೂರು: ನಾಡ ಹಬ್ಬ ದಸರಾಗೆ ಆಗಮಿಸುವಂತೆ ಮೈಸೂರು ದಸರಾ ಉತ್ಸವದ ಸ್ವಾಗತ ಸಮಿತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾಂಪ್ರದಾಯಿಕವಾಗಿ ಅಧಿಕೃತ ಆಹ್ವಾನ ನೀಡಿತು.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಜಿಲ್ಲಾಧಿಕಾರಿ ಸೇರಿದಂತೆ ದಸರಾ ಸ್ವಾಗತ ಸಮಿತಿ ನಿಯೋಗ ಭೇಟಿ ನೀಡಿತು. ಸಂಪ್ರದಾಯದಂತೆ ಮುಖ್ಯಮಂತ್ರಿಗಳನ್ನು ದಸರಾಗೆ ಆಹ್ವಾನಿಸಿ, ಸಿಎಂಗೆ ಸನ್ಮಾನ ಮಾಡಿ ದಸರಾ ಸಿದ್ಧತೆಗಳ ವಿವರ ನೀಡಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ.ಸೋಮಣ್ಣ, ಮೈಸೂರು ದಸರಾ ಸ್ವಾಗತ ಸಮಿತಿಯಿಂದ ಸಿಎಂ ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ಕೊಟ್ಟಿದ್ದೇವೆ. ಸೆಪ್ಟೆಂಬರ್ 29ರ ಬೆಳಗ್ಗೆ 9 ಗಂಟೆ ನಂತರ ಚಾಮುಂಡೇಶ್ವರಿ ಪೂಜೆ ಬಳಿಕ ದಸರಾ ಉದ್ಘಾಟನೆ ಇದ್ದು, ಅಕ್ಟೋಬರ್ 8ರವರೆಗೂ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.