ಬೆಂಗಳೂರು:ಧಾರವಾಡ ಬಿಜೆಪಿ ಮುಖಂಡ ಯೋಗೀಶ್ಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶದ ಆರೋಪದಡಿ ದಾಖಲಾಗಿಸಲಾಗಿರುವ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿರುವುದು ನಿಯಮ ಬಾಹಿರವಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.
ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪದಡಿ ಸಿಬಿಐ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿರುವ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ನಡೆಸಿತು.
ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ವಕೀಲರು, 'ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಒಂದೇ ಆರೋಪದಡಿ ಎರಡು ದೂರುಗಳನ್ನು ದಾಖಲಿಸಲಾಗಿದೆ. ಇದು ಸಂವಿಧಾನದ 20 ನೇ ವಿಧಿಗೆ ವಿರುದ್ಧವಾಗಿದ್ದು, ಇದನ್ನು ರದ್ದುಪಡಿಸಬೇಕು' ಎಂದು ಕೋರಿದರು. ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು, ಸಮಯಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಡಿಸೆಂಬರ್ 1ಕ್ಕೆ ಮುಂದೂಡಲಾಗಿದೆ.