ಕರ್ನಾಟಕ

karnataka

ETV Bharat / state

ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ! - ETV Bharat kannada News

ಇಂದು ಮಧ್ಯರಾತ್ರಿ ಆರಂಭವಾಗುವ ಬೆಂಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ದೇಗುಲದ ಕರಗ ಮಹೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ.

Shri Dharmarayaswamy Karaga
ಶ್ರೀ ಧರ್ಮರಾಯಸ್ವಾಮಿ ಕರಗ

By

Published : Apr 5, 2023, 7:09 PM IST

ಬೆಂಗಳೂರು : ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವ ಗುರುವಾರ ಜರುಗಲಿದ್ದು, ಈ ಬಾರಿ ಕರಗವನ್ನು ಅತ್ಯಂತ ಸಡಗರ, ಸಂಭ್ರಮದೊಂದಿಗೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾಯುತ್ತಿದ್ದಾರೆ. ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಕರಗ ನಡೆಯಲಿದ್ದು, ಇಂದು ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಹೊರಲಿದ್ದಾರೆ.

ಇಂದು ಸಂಜೆಯಿಂದಲೇ ಬಹುನಿರೀಕ್ಷೆಯ ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ತಿಗಳರಪೇಟೆಯಲ್ಲಿರುವ ದೇವಸ್ಥಾನದ ಬಳಿ ಆಗಮಿಸುತ್ತಿದ್ದಾರೆ. ರಾಜಬೀದಿಗಳಲ್ಲಿ ವಿದ್ಯುತ್‌ ದೀಪಾಲಂಕಾರ, ವೀರಕುಮಾರರ ಅಲಗು ಸೇವೆ, ಶಂಖನಾದ, ಗುಡಿಯ ಗಂಟೆಗಳ ಸದ್ದು, ಗೋವಿಂದನ ನಾಮಸ್ಮರಣೆ ಸಡಗರಕ್ಕೆ ಇನ್ನಷ್ಟು ಇಂಬು ನೀಡಲಿದೆ. ಕರಗ ಸಾಗುವ ವೇಳೆ ಭಕ್ತರು ಮಲ್ಲಿಗೆಯ ಹೂಮಳೆಯ ಸುರಿಸಿ ಭಕ್ತಿಯಲ್ಲಿ ಮಿಂದೆಳಲಿದ್ದಾರೆ.

ಕರಗ ವೀಕ್ಷಿಸಲು ನಗರದ ತಿಗಳರಪೇಟೆ ಹಾಗೂ ಸುತ್ತಮುತ್ತಲ ನಾನಾ ಭಾಗದ ಜನರು ಸೇರಿದಂತೆ ಮಾಲೂರು, ಹೊಸಕೋಟೆ, ನೆಲಮಂಗಲ, ತುಮ​ಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್‌, ಸೇಲಂ ಮುಂತಾದ ಕಡೆಗಳಿಂದ ತಿಗಳ ಸಮುದಾಯ ಸೇರಿದಂತೆ ವಿವಿಧ ಧರ್ಮೀಯ ಭಕ್ತಸಮೂಹವೇ ಹರಿದುಬರಲಿದೆ.

ಕೋಮು ಸೌಹಾರ್ದತೆಯ ಪ್ರತೀಕ: ಕಲ್ಯಾಣಪುರಿ ನಾಮಧೇಯದಿಂದ ಪ್ರಖ್ಯಾತವಾಗಿರುವ ನಗರದ ತಿಗಳರಪೇಟೆಯ ಬೆಂಗಳೂರು ಕರಗ ಉತ್ಸವ ಕೋಮು ಸೌಹಾರ್ದತೆಯ ಪ್ರತೀಕವಾಗಿದೆ. ಉತ್ಸವದಂದು ಕರಗಕರ್ತರು ಮಧ್ಯರಾತ್ರಿ ಅಕ್ಕಿಪೇಟೆಯ ಮಸ್ತಾನ್‌ ಸಾಹೇಬರ ದರ್ಗಾಕ್ಕೆ ಪದ್ಧತಿಯಂತೆ ಪೂಜೆ ಸಲ್ಲಿಸಲಿದ್ದಾರೆ. ಯಾವುದೇ ಭೇದ-ಭಾವವಿಲ್ಲದೆ ಹಿಂದೂ ಮುಸ್ಲಿಂ ಜನಾಂಗದವರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಕರಗದ ಮೆರವಣಿಗೆಯು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಳದಿಂದ ಹೊರಟು ಹಲಸೂರುಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀರಾಮ ದೇವಾಲಯ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ನಂತರ ನಗರ್ತಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಭೈರೇದೇವರ ದೇವಾಲಯದ ಮಾರ್ಗವಾಗಿ ಕಬ್ಬನ್‌ ಪೇಟೆಯ ಶ್ರೀರಾಮಸೇವಾ ಮಂದಿರ, 15ನೇ ಗಲ್ಲಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ. ಬಳಿಕ‌ ಮಕ್ಕಳ ಬಸವಣ್ಣ ಗುಡಿ, ಗಾಣಿಗರ ಪೇಟೆ ಚೆನ್ನರಾಯಸ್ವಾಮಿ ದೇವಸ್ಥಾನದಿಂದ ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ರಾಣಾಸಿಂಗ್‌ ಪೇಟೆ ರಸ್ತೆ, ಮಸ್ತಾನ್‌ ಸಾಬ್ ದರ್ಗಾ, ಬಳೇಪೇಟೆ, ಅಣ್ಣಮ್ಮ ದೇವಸ್ಥಾನ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್‌ ವೃತ್ತ, ಕುಂಬಾರ ಪೇಟೆ, ಕಬ್ಬನ್‌ಪೇಟೆ ಮಾರ್ಗವಾಗಿ ಪುನಃ ತಿಗಳರಪೇಟೆಗೆ ಬಂದು ಸೇರಲಿದೆ.

ಕರಗದ ವೇಳೆ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರೆ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.‌ ಮಾರ್ಚ್ 29ಕ್ಕೆ ಕರಗ ಉತ್ಸವ ಆರಂಭವಾಗಿದ್ದು, 11 ದಿನಗಳ ಕಾಲ ಅಂದರೆ ಏಪ್ರಿಲ್‌ 8ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.

ಇದನ್ನೂ ಓದಿ :11 ದಿನಗಳ ಕಾಲ ನಡೆಯುವ ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ABOUT THE AUTHOR

...view details