ಬೆಂಗಳೂರು: ಡಿಜಿಪಿ ನೀಲಮಣಿರಾಜು ನಿವೃತ್ತಿಗೆ ಕ್ಷಣಗಣನೆ ಆರಂಭವಾದ ಹಿನ್ನಲೆ ಈ ಹುದ್ದೆಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದೆ. ರಾಜ್ಯದ ನೂತನ ಸಾರಥಿ ಯರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ನೀಲಮಣಿ ರಾಜು ಸ್ಥಾನಕ್ಕೆ ಎ.ಎಂ. ಪ್ರಸಾದ್ ಹಾಗೂ ಪ್ರವೀಣ್ ಸೂದ್ ನಡುವೆ ಜಿದ್ದಾಜಿದ್ದಿ ಇದ್ದು, ಬಹುತೇಕ ಸೀನಿಯಾರಿಟಿ ಆಧಾರದ ಮೇಲೆ ಎ.ಎಂ. ಪ್ರಸಾದ್ ಆಯ್ಕೆ ಆಗುತ್ತಾರೆ ಅನ್ನೋ ಮಾತುಗಳು ಪೊಲೀಸ್ ಇಲಾಖೆಯಲ್ಲಿ ಕೇಳಿ ಬರುತ್ತಿವೆ.
ಸದ್ಯ ಆಂತರಿಕ ವಿಭಾಗದ ಡಿಜಿಪಿಯಾಗಿರುವ ಆಶಿತ್ ಮೋಹನ್ ಪ್ರಸಾದ್ ಸೇವಾ ಹಿರಿತನದಲ್ಲಿ ಮೊದಲಿಗರಾಗಿದ್ದಾರೆ. ಹೀಗಾಗಿ ಸೇವಾ ಹಿರಿತನದ ಆಧಾರದ ಮೇಲೆ ಇವರನ್ನೇ ಡಿಜಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಲಾಗ್ತಿದೆ. 1985ರ ಬ್ಯಾಚ್ ಐಪಿಎಸ್ ಆಗಿರುವ ಪ್ರಸಾದ್ ಈಗಾಗ್ಲೇ ಡಿಜಿ ಹುದ್ದೆಗೆ ಸ್ಪರ್ಧೆಯಲ್ಲಿರುವ ಪ್ರವೀಣ್ ಸೂದ್ ಹಾಗೂ ತರಬೇತಿ ವಿಭಾಗದ ಡಿಜಿಪಿ ಗರ್ಗ್ ಅವರಿಗಿಂತ ಹಿರಿಯರಾಗಿದ್ದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಪ್ರಸಾದ್ ಅವರಿಗೆ ಕೇವಲ ಒಂಭತ್ತು ತಿಂಗಳು ಮಾತ್ರ ಅವಕಾಶ ಇದೆ.
ಹೀಗಾಗಿ ಸೀನಿಯಾರಿಟಿ ಆಧಾರದ ಮೇಲೆ ಡಿಜಿ ಹುದ್ದೆ ಎ.ಎಂ. ಪ್ರಸಾದ್ಗೆ ಕೊಡಲು ನಿರ್ಧರಿಸಲಾಗಿದೆ ಎನ್ನಲಾಗ್ತಿದೆ. ಮತ್ತೊಂದೆಡೆ ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರು ಕೂಡ ರೇಸ್ನಲ್ಲಿದ್ದಾರೆ. ಆದ್ರೆ ಪ್ರಸಾದ್ ಗಿಂತ ಇವರು ಜೂನಿಯರ್ ಆಗಿದ್ದು, ಇನ್ನು ನಾಲ್ಕು ವರ್ಷಗಳ ಕಾಲ ಸೇವಾವಧಿ ಹೊಂದಿದ್ದಾರೆ. ಹೀಗಾಗಿ ನಾಳೆ ಮಧ್ಯಾಹ್ನ 12 ಗಂಟೆಗೆ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದ್ದು ಯಾರು ಡಿಜಿಯಾಗಲಿದ್ದಾರೆ ಅನ್ನೋದು ಇಲಾಖೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ನಾಳೆ ಡಿಜಿ -ಐಜಿ ನೀಲಮಣಿ ರಾಜು ಅವರು ನಿವೃತ್ತಿಯಾಗಲಿದ್ದು, ಇವರ ಜೊತೆ ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್ ರೆಡ್ಡಿ ಹಾಗೂ ಪೊಲೀಸ್ ಗೃಹ ಮಂಡಳಿಯ ಎಡಿಜಿಪಿ ಔರದ್ಕಾರ್, ಗುಪ್ತದಳದ ಉಪ ಪೊಲೀಸ್ ಮಹಾನಿರೀಕ್ಷಕ ರಾಜೇಂದ್ರ ಪ್ರಸಾದ್ ಸಹ ನಾಳೆಯೇ ತಮ್ಮ ಸೇವಾ ಅವಧಿ ಪೂರ್ಣಗೊಳಿಸಲಿದ್ದಾರೆ.