ಬೆಂಗಳೂರು: ಕಲಬುರಗಿಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಮಾಡಿದೆ. ಆದರೆ, ಕಲ್ಯಾಣ ಕರ್ನಾಟಕದ ಕಲ್ಯಾಣ ಕಾರ್ಯಕ್ರಮಗಳು ಮಾತ್ರ ಕಳೆದ ಮೂರು ವರ್ಷಗಳಲ್ಲಿ ಕುಂಟುತ್ತಾ ಸಾಗುತ್ತಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ಪರಮೋಚ್ಛ ಆದ್ಯತೆ ಎಂಬುದು ಎಲ್ಲ ಪಕ್ಷಗಳು ಮತ್ತು ಸರ್ಕಾರಗಳ ಜಪ. ಈ ಭಾಗದ ಜಿಲ್ಲೆಗಳಲ್ಲಿ ನಂಜುಡಪ್ಪ ವರದಿ ಪ್ರಕಾರ ಇಲಾಖೆಗಳಿಗೆ ಅನುದಾನ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬೊಮ್ಮಾಯಿ ಸರ್ಕಾರ 3 ಸಾವಿರ ಕೋಟಿ ರೂ. ನೀಡಲು ನಿರ್ಧರಿಸಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ಅನುದಾನ ಹಂಚಿಕೆ ಮಾಡಲಾಗುತ್ತದೆ. ಆದರೆ, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮಾತ್ರ ಆಮೆಗತಿಯಲ್ಲೇ ಸಾಗುತ್ತಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕಾಮಗಾರಿಗಳ ಸ್ಥಿತಿಗತಿ ಏನಿದೆ ಎಂಬ ಮಾಹಿತಿ ಇಲ್ಲಿದೆ.
ಕಲ್ಯಾಣಕ್ಕೆ ಹಂಚಿಕೆಯಾದ ಅನುದಾನ:ಬೀದರ್ ಜಿಲ್ಲೆಯಲ್ಲಿ ಬರುವ ಐದು ತಾಲೂಕುಗಳಿಗೆ 2019-20ರಲ್ಲಿ 193.71 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. 2020-21ರಲ್ಲಿ 145.85 ಕೋಟಿ ರೂ. ಹಾಗೂ 2021-22ರಲ್ಲಿ 185.84 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.
ಕಲಬುರಗಿ ಜಿಲ್ಲೆಯ ಏಳು ತಾಲೂಕುಗಳಿಗೆ 2019-20ರಲ್ಲಿ 363.96 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಅದೇ ರೀತಿ 2020-21ರಲ್ಲಿ 274.22 ಕೋಟಿ ರೂ. ಹಾಗೂ 2021-22ರಲ್ಲಿ 349.23 ಕೋಟಿ ರೂ. ಅನುದಾನ ನೀಡಲಾಗಿದೆ. ಯಾದಗಿರಿ ಜಿಲ್ಲೆಯ ಮೂರು ತಾಲೂಕುಗಳಿಗೆ 2019-20ರಲ್ಲಿ 151.67 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದರೆ, 2020-21ರಲ್ಲಿ 114.44 ಕೋಟಿ ರೂ. ಮತ್ತು 2021-22ರಲ್ಲಿ 145.72 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ರಾಯಚೂರಿನ ಐದು ತಾಲೂಕುಗಳಿಗೆ 2019-20ರಲ್ಲಿ 232.76 ಕೋಟಿ ರೂ. 2020-21ರಲ್ಲಿ 175.63 ಕೋಟಿ ರೂ. ಹಾಗೂ 2021-22ರಲ್ಲಿ 223.68 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕೊಪ್ಪಳದ ನಾಲ್ಕು ತಾಲೂಕುಗಳಿಗೆ 2019-20ರಲ್ಲಿ 148 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದರೆ, 2020-21ರಲ್ಲಿ 112.17 ಕೋಟಿ ರೂ. ಮತ್ತು 2021-22ರಲ್ಲಿ 142.86 ಕೋಟಿ ರೂ. ಅನುದಾನ ನೀಡಲಾಗಿದೆ.