ಕರ್ನಾಟಕ

karnataka

ETV Bharat / state

ದೇಶದ ಅಭಿವೃದ್ಧಿ ಯೋಜನೆಗಳಿಗೆ ತಡೆ ನೀಡಲಾಗದು : ಹೈಕೋರ್ಟ್

ಯಾವ ಪ್ರದೇಶದಲ್ಲಿ ಬಂದರು ಅಭಿವೃದ್ಧಿ ಮಾಡಬೇಕು ಎಂಬುದನ್ನು ನಿರ್ಧರಿಸಲು ನ್ಯಾಯಾಲಯ ಪರಿಣಿತಿ ಹೊಂದಿಲ್ಲ. ಹೀಗಾಗಿ, ದೇಶದ ಆರ್ಥಿಕತೆಗೆ ಪೂರಕವಾಗಿ ಅಭಿವೃದ್ಧಿ ಯೋಜನೆಗಳಿಗೆ ತಡೆ ನೀಡಲಾಗದು. ಅರ್ಜಿದಾರರ ಮನವಿ ಪುರಸ್ಕರಿಸಲಾಗದು ಎಂದು ಹೈಕೋರ್ಟ್​ ಪೀಠ ಸ್ಪಷ್ಟಪಡಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Nov 29, 2021, 3:26 PM IST

ಬೆಂಗಳೂರು: ಹೊನ್ನಾವರ ಬಂದರು ವಿಸ್ತರಣೆ ಮತ್ತು ಅಭಿವೃದ್ಧಿ ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ದೇಶದ ಆರ್ಥಿಕತೆಗೆ ಪೂರಕವಾದ ಅಭಿವೃದ್ಧಿ ಯೋಜನೆಗಳಿಗೆ ತಡೆ ನೀಡಲಾಗದು ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಯೋಜನೆ ವಿರೋಧಿಸುತ್ತಿರುವ ಹೊನ್ನಾವರ ತಾಲೂಕು ಹಸಿಮೀನು ವ್ಯಾಪಾರಸ್ಥರ ಸಂಘದ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ನಿರ್ದೇಶಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರು ವಿಸ್ತರಣೆ ಮತ್ತು ಅಭಿವೃದ್ಧಿ ಯೋಜನೆಯನ್ನು ಪ್ರಶ್ನಿಸಿ ಹೊನ್ನಾವರ ತಾಲೂಕು ಹಸಿಮೀನು ವ್ಯಾಪಾರಸ್ಥರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ಆದೇಶದಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಚೆನ್ನೈನ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರ (ಎನ್‌ಸಿಎಸ್ ಸಿಎಂ) ಉದ್ದೇಶಿತ ಬಂದರು ಅಭಿವೃದ್ಧಿಗೆ ಗುರುತಿಸಿರುವ 45 ಹೆಕ್ಟೇರ್ ಪ್ರದೇಶದ ಸರ್ವೇ ನಡೆಸಿ ವರದಿ ಸಲ್ಲಿಸಿದೆ. ಈ 45 ಹೆಕ್ಟೇರ್ ಪ್ರದೇಶದಲ್ಲಿ ಆಮೆಗಳು ಗೂಡು ಕಟ್ಟುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪರಿಸರ ಪರಿಣಾಮ ಅಧ್ಯಯನ ನಡೆಸಿದ ನಂತರವೇ ಕಾಮಗಾರಿಗೆ ಪರಿಸರ ಇಲಾಖೆ ಯೋಜನೆಗೆ ಅನುಮತಿ ನೀಡಿದೆ. ಯೋಜನೆಗೆ ಸಕ್ಷಮ ಪ್ರಾಧಿಕಾರದಿಂದ ಇತರೆ ಎಲ್ಲಾ ಅಗತ್ಯ ಅನುಮತಿ ಪಡೆಯಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಒಂದೊಮ್ಮೆ ಕಾಮಗಾರಿ ನಡೆಸುವ ಪ್ರದೇಶದಲ್ಲಿ ಆಮೆಗಳು ಗೂಡು ಕಟ್ಟುವುದು ಕಂಡು ಬಂದರೆ, ಅವುಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ರಾಜ್ಯ ಸರ್ಕಾರ ಮತ್ತು ಹೊನ್ನಾವರ ಬಂದರು ಪ್ರೈವೇಟ್ ಲಿಮಿಟೆಡ್ ಸೇರಿ ಇತರೆ ಪ್ರತಿವಾದಿಗಳು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

ಯಾವ ಪ್ರದೇಶದಲ್ಲಿ ಬಂದರು ಅಭಿವೃದ್ಧಿ ಮಾಡಬೇಕು ಎಂಬುದನ್ನು ನಿರ್ಧರಿಸಲು ನ್ಯಾಯಾಲಯ ಪರಿಣಿತಿ ಹೊಂದಿಲ್ಲ. ಹೀಗಾಗಿ, ದೇಶದ ಆರ್ಥಿಕತೆಗೆ ಪೂರಕವಾಗಿ ಅಭಿವೃದ್ಧಿ ಯೋಜನೆಗಳಿಗೆ ತಡೆ ನೀಡಲಾಗದು. ಅರ್ಜಿದಾರರ ಮನವಿ ಪುರಸ್ಕರಿಸಲಾಗದು ಎಂದು ಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರ ಕೋರಿಕೆ ಏನು?:ಕರಾವಳಿ ನಿಯಂತ್ರಣ ವಲಯದ ನಿಯಮಗಳ ಪ್ರಕಾರ ಬಂದರು ಅಭಿವೃದ್ಧಿಗೆ ಗುರುತಿಸಿರುವ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯವನ್ನು ನಿರ್ಬಂಧಿಸಲಾಗಿದೆ. ಯೋಜಿತ ಸ್ಥಳದಲ್ಲಿ ಕಡಲಾಮೆ ವಲಯವಿದೆ. ಅಲ್ಲಿ ಅಮೆಗಳು ಗೂಡು ಕಟ್ಟುತ್ತವೆ. ಬಂದರು ಅಭಿವೃದ್ಧಿ ಕಾಮಗಾರಿಯಿಂದ ಅವುಗಳಿಗೆ ತೊಂದರೆ ಆಗುತ್ತದೆ.

ಹಾಗೆಯೇ, ಸ್ಥಳೀಯ ಮೀನುಗಾರರ ಜೀವನಾಧಾರಕ್ಕೆ ಧಕ್ಕೆ ಉಂಟಾಗುತ್ತದೆ. ಹೀಗಾಗಿ, ಯೋಜನೆಯನ್ನು ತಡೆಹಿಡಿಯಬೇಕು ಹಾಗೂ ಯೋಜನೆಗೆ ನೀಡಲಾಗಿರುವ ಪರಿಸರ ನಿರಾಕ್ಷೇಪಣಾ ಪತ್ರ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ABOUT THE AUTHOR

...view details