ಬೆಂಗಳೂರು:ಕುಸುಮ ಹನುಮಂತರಾಯಪ್ಪ ಅವರಂತಹ ವಿದ್ಯಾವಂತರನ್ನು ಜನಪ್ರತಿನಿಧಿಗಳನ್ನಾಗಿ ಕಳಿಸಿಕೊಟ್ಟರೆ, ಮುಂದೆ ಅವರು ರಾಜ್ಯದ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಭೆಗೆ ಲಗ್ಗೆರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇದೇ ಉದ್ದೇಶಕ್ಕಾಗಿಯೇ ಒಬ್ಬ ಪ್ರಜ್ಞಾವಂತ ಹೆಣ್ಣುಮಗಳಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಇಂತಹವರನ್ನು ಭಾರತ ಅಭ್ಯರ್ಥಿಯನ್ನಾಗಿ ಗಳಿಸಿದರೆ ಹಾಗೂ ಜನ ಆಯ್ಕೆ ಮಾಡಿ ಕಳುಹಿಸಿಕೊಟ್ಟರೆ ಮುಂದೆ ಅವರು ಉತ್ತಮ ಸೇವೆ ಸಲ್ಲಿಸುವ ಅವಕಾಶ ಒದಗಿ ಬರಲಿದೆ. ಪಕ್ಷದ ನೀತಿ ಹಾಗೂ ತತ್ತ್ವಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಾರ್ಯಾರು ನಮಗೆ ಸಹಾಯ ಮಾಡುತ್ತಾರೋ ಅವರಿಗೆ ಪಕ್ಷದ ಸಹಕಾರ ಇರಲಿದೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಸಭೆ ಸದಸ್ಯಮಲ್ಲಿಕಾರ್ಜುನ ಖರ್ಗೆ 2008ರಲ್ಲಿ ಈ ಭಾಗದ ಜನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿದ್ದರು. ಅವರು ಈಗ ಕಾಂಗ್ರೆಸ್ ಪಕ್ಷ ಬೇಡ ಎಂದು ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಬಂದಮೇಲೆ ಅದೇ ಪಕ್ಷದಲ್ಲಿ ಐದು ವರ್ಷ ಇರಬೇಕಾಗಿತ್ತು. ಕೆಲಸ ಮಾಡಬೇಕಿತ್ತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಮುನಿರತ್ನ ತೊರೆದಿರುವುದು ಸರಿಯಲ್ಲ. ಸಾಕಷ್ಟು ಜನಪ್ರಿಯ ಯೋಜನೆಗಳನ್ನ ದೇಶದ ಜನರಿಗೆ ಕಾಂಗ್ರೆಸ್ ಮಾಡಿದೆ. ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಅಡಿ ರಾಜ್ಯ ಸರ್ಕಾರ ಈ ಭಾಗಕ್ಕೆ ಸಾಕಷ್ಟು ಅನುದಾನ ನೀಡಿದೆ. ಕೊಳಗೇರಿಗಳ ಅಭಿವೃದ್ಧಿಗೂ ಸಾಕಷ್ಟು ಹಣ ನೀಡಿದೆ. ಹೀಗಾಗಿ ಈ ಭಾಗದ ಜನರನ್ನು ನಾವು ಕೇಳುವುದಿಷ್ಟೇ, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದರು.
ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಆರಂಭವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾತುಗಳು ಬರುವುದು ಸಹಜ. ಆದರೆ, ನಾವು ಈ ಸಂದರ್ಭ ಚುನಾವಣೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸಬೇಕು. ಸದ್ಯ ನಮ್ಮ ಪಕ್ಷ ಪ್ರತಿಪಕ್ಷದ ಸ್ಥಾನದಲ್ಲಿದೆ. ಜನರಿಗೆ ಯಾರು ಕೆಲಸ ಮಾಡಿದ್ದಾರೆ ಅವರಿಗೆ ಮತ ನೀಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.