ಬೆಂಗಳೂರು: ರಾಜ್ಯದಲ್ಲಿ ನಿರ್ಮಾಣಗೊಳ್ಳುವ ಜವಳಿ ಪಾರ್ಕ್ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು ಅನಿವಾರ್ಯ ಎಂದು ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಇಂದು ಪ್ರಶ್ನೋತ್ತರದ ವೇಳೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಶಿಗ್ಗಾಂವಿ ಮತ್ತು ಕಾರ್ಕಳಕ್ಕೆ 2020-21ನೇ ಸಾಲಿನಲ್ಲಿ ಜವಳಿ ಪಾರ್ಕ್ ಗಳನ್ನು ಮಂಜೂರು ಮಾಡಲಾಗಿತ್ತು. ಶಿಗ್ಗಾಂವಿ ಕ್ಷೇತ್ರದ ಜವಳಿ ಪಾರ್ಕ್ ಅನ್ನು 50 ಕೋಟಿ ರೂ. ವೆಚ್ಚದಲ್ಲಿ 14 ಎಕರೆಯಷ್ಟು ಅಭಿವೃದ್ಧಿಪಡಿಸಲಾಗಿದೆ. ಆದರೆ, ಕಾರ್ಕಳದ ಪಾರ್ಕ್ ಅಭಿವೃದ್ಧಿಯಾಗಿಲ್ಲ ಎಂದರು.
ಬಹುಶಃ ಆಗಲೇ ಸುನೀಲ್ ಕುಮಾರ್ ಅವರು ಒತ್ತಡ ಹೇರಿದ್ದರೆ ಅಭಿವೃದ್ದಿಯಾಗುತ್ತಿತ್ತು ಅಥವಾ ಮುಖ್ಯಮಂತ್ರಿಯವರ ಗುಡ್ ಬುಕ್ ಲಿಸ್ಟ್ನಲ್ಲಿ ಬಹುಶಃ ಸುನೀಲ್ ಕುಮಾರ್ ಹೆಸರು ಇರಲಿಲ್ಲ ಎಂದೆನಿಸುತ್ತದೆ ಎಂದು ಕಿಚಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ನಮ್ಮ ಮತ್ತು ಮುಖ್ಯಮಂತ್ರಿಗಳ ನಡುವೆ ಉತ್ತಮ ಸಂಬಂಧವಿದೆ. ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಬಂಧದ ಬಗ್ಗೆ ಆಲೋಚನೆ ಮಾಡಿ ಎಂದು ಸಲಹೆ ನೀಡಿದ್ದಲ್ಲದೆ, ಕಾರ್ಕಳ ಕ್ಷೇತ್ರದಲ್ಲಿ ಜವಳಿ ಪಾರ್ಕ್ಗಾಗಿ ಒಂದೇ ಕಡೆ 15 ಎಕರೆ ಜಮೀನು ಒದಗಿಸಲು ಸಾಧ್ಯವಾಗಲಿಲ್ಲ. ಕ್ಷೇತ್ರದಲ್ಲಿ ಬಹುತೇಕ ಕಡೆ ಅರಣ್ಯ ಭೂಮಿ ಇದೆ. ಅದಕ್ಕೆ ಪೂರ್ವಾನುಮತಿ ದೊರೆತಿರಲಿಲ್ಲ . ಹೀಗಾಗಿ ಎರಡು ವರ್ಷ ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದರು.
ಜವಳಿ ಪಾರ್ಕ್ಅನ್ನು ಸರ್ಕಾರದ ವತಿಯಿಂದಲೇ ಅಭಿವೃದ್ದಿಪಡಿಸಬೇಕು. ಖಾಸಗಿಯವರಿಗೆ ಒಪ್ಪಿಸಬಾರದು ಎಂದು ಶಾಸಕರು ಒತ್ತಾಯಿಸಿದರು. ಅದಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಖಾಸಗಿ ಸಹಭಾಗಿತ್ವ ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಏಳು ಜವಳಿ ಪಾರ್ಕ್ಗಳನ್ನು ತಲಾ ಸಾವಿರ ಎಕರೆ ಸಾಮರ್ಥ್ಯದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಅದಕ್ಕೂ ಕೂಡ ಖಾಸಗಿ ಸಹಭಾಗಿತ್ವವನ್ನೇ ಆಶ್ರಯಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಕಳ ಜವಳಿ ಪಾರ್ಕಿಗೆ ಮಾಸ್ಟರ್ ಡೆವಲಪರ್ಗಳೊಂದಿಗೆ ಚರ್ಚಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.