ಬೆಂಗಳೂರು:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಉದ್ದನೆಯ ಸರತಿ ಸಾಲುಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಹೊಸ ಮೊಬೈಲ್ ಅಪ್ಲಿಕೇಶನ್ ಪ್ರತಿ ಮತಗಟ್ಟೆಯಲ್ಲಿನ ಸರದಿಗಳ ಬಗ್ಗೆ ನೈಜ ಸಮಯದ ಚಿತ್ರಣವನ್ನು ನೀಡಲಿದೆ. ನಗರ ಮತದಾರರನ್ನು ಮತದಾನ ಪ್ರಕ್ರಿಯೆಗೆ ಆಕರ್ಷಿಸಲು ಜಿಲ್ಲಾ ಚುನಾವಣಾ ಕಚೇರಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಂಟಿಯಾಗಿ ಅಪ್ಲಿಕೇಶನ್ ಅಭಿವೃದ್ಧಿಪಡಿಸುತ್ತಿದೆ. ಚುನಾವಣಾ ಆಯೋಗವು ಸೂಚಿಸಿದಂತೆ ಮತದಾರರ ನಿರಾಸಕ್ತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕೇವಲ 55.04 ಶೇಕಡಾ ಮತಗಳು ದಾಖಲಾಗಿದ್ದವು.
ಮತದಾರರಲ್ಲಿ ಕಳವಳ ನಿವಾರಿಸುವ ಆಪ್ : ಮತಗಟ್ಟೆಗಳಲ್ಲಿ ಕಾಯುವ ಸಮಯ ಮತ್ತು ಪಾರ್ಕಿಂಗ್ ಸ್ಥಳದ ಕೊರತೆಯ ಬಗ್ಗೆ ಬೆಂಗಳೂರಿನ ಮತದಾರರಲ್ಲಿ ಕಳವಳವಿದೆ. ಈ ಅಪ್ಲಿಕೇಶನ್ ಮತಗಟ್ಟೆಗಳಲ್ಲಿನ ಪರಿಸ್ಥಿತಿಯ ನೈಜ-ಸಮಯದ ನವೀಕರಣಗಳನ್ನು ನೀಡುತ್ತದೆ. ನಾವು ಮತಗಟ್ಟೆಗಳ ಸಮೀಪ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುತ್ತಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮತ್ತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದಾರೆ.
28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳು ಸೂಕ್ಷ್ಮ: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಇನ್ನೆರಡನ್ನು ಮುಂದಿನ ಕೆಲವೇ ದಿನಗಳಲ್ಲಿ ಪಟ್ಟಿಗೆ ಸೇರಿಸಲು ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಸೂಕ್ಷ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಂದ ಹೆಚ್ಚು ಖರ್ಚು ಮಾಡುವುದನ್ನು ತಡೆಯಲು ಇಬ್ಬರು ಹೆಚ್ಚುವರಿ ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗುವುದು ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಸಿ ವಿಜಿಲ್ ಆ್ಯಪ್ನಿಂದ ದೂರು ಸಲ್ಲಿಕೆ: ಚುನಾವಣಾ ಆಯೋಗವು (ಮಾರ್ಚ್ 2019) ಲೋಕಸಭಾ ಚುನಾವಣೆಯನ್ನು ಅತ್ಯಂತ ಮುಕ್ತ, ಪಾರದರ್ಶಕವಾಗಿ ನಡೆಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು. ಈ ದಿಸೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ದೃಶ್ಯಾವಳಿ, ಛಾಯಾಚಿತ್ರಗಳನ್ನು ನೇರವಾಗಿ ಅಪ್ಲೋಡ್ ಮಾಡಬಹುದಾದ ಮೊಬೈಲ್ ಅಪ್ಲಿಕೇಷನ್ ಸಿ-ವಿಜಿಲ್ ಎಂಬ ಆ್ಯಪ್ ಪರಿಚಯಿಸಿತ್ತು.