ಬೆಂಗಳೂರು: ರಾಜ್ಯವನ್ನು ವಿದೇಶಗಳೊಂದಿಗೆ ಬೆಸೆಯುವ, ಸಾಗರೋತ್ತರ ರಾಷ್ಟ್ರಗಳೊಂದಿಗೆ ಸರಕು ಸಾಗಾಣಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಬೇಲಿಕೇರಿ ಹಾಗೂ ಪಾವಿನಕುರ್ವೆ ಬಂದರುಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಜಲಸಾರಿಗೆ ಮಂಡಳಿ ಅನುಮೋದನೆ ನೀಡಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ 5ನೇ ಸಭೆ ನಡೆಯಿತು.ಅಂಕೋಲಾ ತಾಲೂಕಿನ ಬೇಲಿಕೇರೆಯಲ್ಲಿ 40 ಮೆಟ್ರಿಕ್ ಟನ್ ಸರಕು ಸಾಮರ್ಥ್ಯದ 3997 ಕೋಟಿ ವೆಚ್ಚದ ಬಂದರು ಹಾಗೂ ಹೊನ್ನಾವರ ತಾಲೂಕಿನ ಪಾವಿನಕುರ್ವೆಯಲ್ಲಿ 14 ಮೆಟ್ರಿಕ್ ಟನ್ ಸರಕು ಸಾಮರ್ಥ್ಯದ 1967 ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದ ಬಂದರನ್ನು ಅಭಿವೃದ್ಧಿಪಡಿಸಲು ಸರ್ಕಾರದ ಪರವಾಗಿ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.
ಬೇಲಿಕೇರಿ ಹಾಗೂ ಪಾವಿನಕುರ್ವೆ ಬಂದರುಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಜಲಸಾರಿಗೆ ಮಂಡಳಿಯು ಅನುಮೋದನೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಂಸದ ಅನಂತಕುಮಾರ ಹೆಗಡೆ, ಮುಖ್ಯಮಂತ್ರಿಗಳಿಗೆ ಹಾಗು ಮೀನುಗಾರಿಕಾ ಸಚಿವ ಎಸ್.ಅಂಗಾರಗೆ ಅಭಿನಂದನೆ ಸಲ್ಲಿಸಿದರು.
ಸಾಗರಮಾಲಾ ಯೋಜನೆಯಡಿಯಲ್ಲಿ ಕರಾವಳಿ ಭಾಗದಲ್ಲಿ ಬಂದರುಗಳು ನಿರ್ಮಾಣವಾಗುತ್ತಿದ್ದು ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ, ಇದರಿಂದ ಜಿಲ್ಲೆಯ ಹಾಗೂ ರಾಜ್ಯದ ಆರ್ಥಿಕ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ವೇಗದಲ್ಲಿ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಸಂಸದರು, ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ ಅವರನ್ನು ಒಕ್ಕಲೆಬ್ಬಿಸದೇ ಅವರೊಂದಿಗೆ ಸಮನ್ವಯ ಸಾಧಿಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ:ಸುಮಲತಾ-ಹೆಚ್ಡಿಕೆ ವಾಕ್ಸಮರ: ನಮ್ಗೆ ಕೂತು ನೋಡೋಕೆ ಸಮಯವಿಲ್ಲ- ಸಚಿವ ಸವದಿ