ಬೆಂಗಳೂರು: "ನಾನು ನನ್ನ ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದೆ. ಒಳ್ಳೆಯ ರಸ್ತೆ ಆಗುತ್ತದೆ ಎಂಬ ಮಹಾತ್ವಕಾಂಕ್ಷೆಯಿಂದ ನೈಸ್ ಯೋಜನೆ ಮಾಡಿದೆ. ಮೈಸೂರಿಗೆ ಒಂದು ಗಂಟೆಯಲ್ಲಿ ಹೋಗಬಹುದು ಅಂತ ಇದನ್ನು ಮಾಡಲಾಯಿತು. ಆದರೆ ಮಹಾನುಭಾವರು ದೊಡ್ಡ ಪೆಟ್ಟು ಕೊಟ್ಟರು. ಇದರ ವಿರುದ್ಧ ಮೂರು ದಶಕದಿಂದ ಹೋರಾಟ ಮಾಡುತ್ತಿದ್ದೇನೆ. ಸಿಎಂಗೂ ಪತ್ರ ಬರೆದಿದ್ದೇನೆ. ಹಾಗಾಗಿ ಕೂಡಲೇ ನೈಸ್ ಯೋಜನೆಯನ್ನು ಸರ್ಕಾರ ವಶಕ್ಕೆ ಪಡೆಯಬೇಕು" ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಗ್ರಹಿಸಿದರು.
ಶೇಷಾದ್ರಿಪುರದಲ್ಲಿರುವ ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "13,404 ಎಕರೆ ಭೂಮಿಯನ್ನು ನೈಸ್ ವಶಪಡಿಸಿಕೊಂಡಿದೆ. ಅದನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಸಿಎಂಗೆ ಪತ್ರ ಬರೆದಿದ್ದೆ. 13 ಸಾವಿರ ಎಕರೆ ಬೆಲೆ 7 ಸಾವಿರ ಕೋಟಿ ರೂ ಅಂತ ಸದನ ಸಮಿತಿ ವರದಿ ಕೊಟ್ಟಿದೆ. ಅಧಿಕಾರಿಗಳೇ ಈ ವರದಿ ಕೊಟ್ಟಿದ್ದಾರೆ. ಇವತ್ತು ಇದರ ಬೆಲೆ ಇನ್ನೂ ಜಾಸ್ತಿ ಆಗುತ್ತದೆ. ಸಿದ್ದರಾಮಯ್ಯಗೆ ಏನ್ ಕಷ್ಟ ಇದೆಯೋ ಗೊತ್ತಿಲ್ಲ?, ಸಿದ್ದರಾಮಯ್ಯ ಇಷ್ಟೊಂದು ಅಕ್ರಮ ಆಗಿದ್ದರೂ ಏನೂ ಕ್ರಮ ತೆಗೆದುಕೊಂಡಿಲ್ಲ. ಬಡವರ ಪರ ಮಾತಾಡುವ ಸಿಎಂ ಯಾಕೆ ಕ್ರಮ ತೆಗೆದುಕೊಂಡಿಲ್ಲ?. ಸಿದ್ದರಾಮಯ್ಯ ಎಷ್ಟು ವರ್ಷ ಆಳಿದರೂ ಕಪ್ಪುಚುಕ್ಕೆಯಿಂದ ಹೊರಗೆ ಬರಲು ಸಾಧ್ಯವಿಲ್ಲ" ಎಂದರು.
"ನೈಸ್ ರೋಡ್ ಪ್ರಾಜೆಕ್ಟ್ ವಿಷಯ ಎಲ್ಲರಿಗೂ ಗೊತ್ತಿದೆ. ಬಡವರಿಗೆ ಇದರಿಂದ ಅನ್ಯಾಯ ಆಗಿದೆ. ನಮ್ಮ ಪಕ್ಷ ಇದರ ವಿರುದ್ಧ ಧ್ವನಿ ಎತ್ತಿದೆ. ವಿಧಾನಸಭೆಯಲ್ಲೂ ಸುದೀರ್ಘ ಚರ್ಚೆ ಆಗಿದೆ. ವಿಧಾನಸಭೆಯಲ್ಲಿ ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ನೇಮಕ ಮಾಡಿತ್ತು. ಸದನ ಸಮಿತಿ ವರದಿ ಕೊಟ್ಟಿದೆ. ಎಷ್ಟು ಅಕ್ರಮ ಆಗಿದೆ ಮತ್ತು ಈ ಪ್ರಾಜೆಕ್ಟ್ ಅನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಅಂತ ವರದಿ ಕೊಟ್ಟಿದೆ. ಆದರೆ ಸರ್ಕಾರ ಅಂತಿಮ ನಿರ್ಧಾರ ಮಾಡಿಲ್ಲ. ಇದಕ್ಕೆ ಕಾರಣ ಗೊತ್ತಿಲ್ಲ. ಅಕ್ಟೋಬರ್ 19ರಲ್ಲಿ ಸಿಎಂ ಅವರಿಗೆ ಪತ್ರ ಬರೆದಿದ್ದೆ. ನೈಸ್ ವಿಚಾರವಾಗಿ ಕ್ರಮಕ್ಕೆ ಆಗ್ರಹಿಸಿದ್ದೇನೆ. ಸೋನಿಯಾ ಗಾಂಧಿ ಅವರ ಬಳಿಯೂ ಇದು ಚರ್ಚೆ ಆಗಿದೆ. ಧರ್ಮಸಿಂಗ್ ಕಾಲದಲ್ಲಿಯೇ ಚರ್ಚೆ ಆಗಿತ್ತು. ಆಗ ಸೋನಿಯಾ ಗಾಂಧಿ ಧರ್ಮಸಿಂಗ್ ಅವರಿಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದರು. ಆದರೆ ಇನ್ನೂ ಆಗಿಲ್ಲ" ಎಂದು ಹೇಳಿದರು.