ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರಕ್ಕೆ ನೀರು ಎಲ್ಲಿಂದ ತರುವೀರಿ : ಬಿಎಸ್​ವೈ ಪ್ರಶ್ನಿಸಿದ ದೇವೇಗೌಡರು

ಮಹಾರಾಷ್ಟ್ರಕ್ಕೆ ನೀರು ಬಿಡುವುದಾಗಿ ಹೇಳಿರುವ ಸಿಎಂ ಯಡಿಯೂರಪ್ಪನವರು ಅದಕ್ಕಾಗಿ ನೀರು ಎಲ್ಲಿಂದ ತರುತ್ತಾರೆ? ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಾತನಾಡಿದರು

By

Published : Oct 18, 2019, 9:02 PM IST

ಬೆಂಗಳೂರು :ಮಹಾರಾಷ್ಟ್ರಕ್ಕೆ ಸಿಎಂ ಯಡಿಯೂರಪ್ಪನವರು ನೀರು ಎಲ್ಲಿಂದ ತರುತ್ತಾರೆ? ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರಶ್ನೆ ಮಾಡಿದ್ದಾರೆ.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿಂದು ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣದಿಂದ ನಮಗೆ ಹಂಚಿಕೆ ಆಗಿದ್ದ ನೀರನ್ನು ಅವರಿಗೆ ಬಿಟ್ಟು ಕೊಡ್ತಾರಾ ?. ಯಾವುದೇ ಕಾರಣಕ್ಕೂ ಅವರಿಗೆ ನೀರು ಕೊಡುವುದಕ್ಕೆ ಸಾಧ್ಯವೇ ಇಲ್ಲ ಎಂದರು.

ಮಹದಾಯಿ ನೀರಿನ ಬಗ್ಗೆ ಇನ್ನೂ ಗೊಂದಲ ಇದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೂ ನಮಗೆ ಮಹದಾಯಿ ನೀರು ದೊರೆತಿಲ್ಲ. ರೈತರು ರೈಲ್ವೆ ನಿಲ್ದಾಣದಲ್ಲಿ ಕುಳಿತು ಧರಣಿ ನಡೆಸುತ್ತಿದ್ದಾರೆ. ಆದರೆ, ಈಗ ಯಡಿಯೂರಪ್ಪನವರು ನೀರು ಬಿಡುಗಡೆ ಬಗ್ಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಾತು

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದಕ್ಕಾಗಿ ಯಡಿಯೂರಪ್ಪ ಈ ರೀತಿಯಾಗಿ ಹೇಳಿರಬಹುದು ಎಂಬುದು ನನ್ನ ಭಾವನೆ. ಕೇವಲ ಓಟ್​ಗಾಗಿ ಆ ರೀತಿ ಹೇಳಿರಬಹುದು ಎಂದು ನಯವಾಗಿಯೇ ಟಾಂಗ್ ನೀಡಿದರು.

ಇದೇ ವೇಳೆ ಸಾವರ್ಕರ್ಗೆ ಭಾರತರತ್ನ ಕೊಡುವ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌಡರು, ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇರುವುದರಿಂದ ಈ ವಿಷಯ ಪ್ರಸ್ತಾಪ ಮಾಡಿದೆ. ಚುನಾವಣೆಗಾಗಿ ಬಿಜೆಪಿ ಇದನ್ನು ಪ್ರಸ್ತಾಪ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಾವರ್ಕರ್ ಹಿಂದೂ ರಾಷ್ಟ್ರವಾದಿಯಾಗಿ ಹೋರಾಟ ಮಾಡಿದವರು. ಮಹಾತ್ಮ ಗಾಂಧಿ ಕೊಲೆ ಕೇಸ್​​ನಲ್ಲಿ ಅವರು ಆರೋಪಿ ಆಗಿದ್ರು. ಆದರೆ, ಅದನ್ನು ಸಾಬೀತು ಮಾಡುವ ಹಂತದಲ್ಲಿ ವಿಫಲವಾಯ್ತು. ಹೀಗಾಗಿ, ಅವರು ಶಿಕ್ಷೆಯಿಂದ ಪಾರಾದಾರು. ಮಹಾತ್ಮ ಗಾಂಧಿ ಕೊಲೆಗೆ ಅವರು ಕಾರಣ ಅಂತ ಕೋರ್ಟ್ ಅನುಮಾನ ವ್ಯಕ್ತಪಡಿಸಿತ್ತು ಎಂದರು.

ಆದರೆ, ಸಾಕ್ಷಿ ಇಲ್ಲದಿರುವುದರಿಂದ ಅವರಿಗೆ ಶಿಕ್ಷೆ ನೀಡಲಿಲ್ಲ, ನಂತರ ಹಿಂದೂ ಮಹಾಸಭಾ ಸೇರಿದಂತೆ ಹಿಂದುತ್ವ ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡ್ರು. ಚುನಾವಣೆ ಇರುವುದಕ್ಕೆ ಬಿಜೆಪಿ ಈಗ ಸಾವರ್ಕರ್ ವಿಷಯವನ್ನು ಪ್ರಸ್ತಾಪ ಮಾಡಿದೆ ಅಷ್ಟೆ. ನೋಡೋಣ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ ಎಂದರು.

ABOUT THE AUTHOR

...view details