ಬೆಂಗಳೂರು: ಗಾಂಜಾ ವಿರುದ್ಧ ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ನಡು ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹಬೀಬ್ ಖಾನ್, ತುಷಾರ್ ಪಟ್ನಾಯಕ್ ಇಬ್ಬರು ಆರೋಪಿಗಳನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ಲಕ್ಷ ಮೌಲ್ಯದ 4.3 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ ಆರೋಪಿಗಳು ಪೀಣ್ಯದ ಕಾರ್ಲೆ ಫ್ಯಾಕ್ಟರಿ ಹತ್ತಿರ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಆರೋಪಿ ತುಷಾರ್ ಪಟ್ನಾಯಕ್ ಮೂರು ವರ್ಷಗಳ ಹಿಂದೆ ಎಂಬಿಎ ವ್ಯಾಸಂಗಕ್ಕಾಗಿ ನಗರಕ್ಕೆ ಬಂದಿದ್ದ. ವ್ಯಾಸಂಗ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ತುಷಾರ್ ಲಾಕ್‌ಡೌನ್ ಸಮಯದಲ್ಲಿ ಕೆಲಸದಿಂದ ತೆಗೆದಿದ್ದರು. ಕೆಲಸ ಕಳೆದುಕೊಂಡಿದ್ದರಿಂದ ಹಣಕ್ಕಾಗಿ ಅಕ್ರಮದ ದಾರಿ ತುಳಿದಿದ್ದಾನೆ.
ಪರಿಚಯಸ್ಥ ವ್ಯಕ್ತಿಯಿಂದ ಮಾಲೂರಿನಿಂದ ಗಾಂಜಾ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ. ಕೃತ್ಯಕ್ಕೆ ಸಹಕರಿಸಿದ ಆಟೊ ಚಾಲಕ ಹಬೀಬ್ ಖಾನ್ನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..
ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ ಫೇಸ್ ಬುಕ್, ಮೆಸೆಂಜರ್ನಲ್ಲಿ ಗ್ರಾಹಕರ ಹುಡುಕಾಟ:
ಸೋಷಿಯಲ್ ಮೀಡಿಯಾದಲ್ಲಿ ಗ್ರಾಹಕರನ್ನು ಹುಡುಕಾಡಿ ಗಾಂಜಾ ಅಯಿಲ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಸೆರೆಹಿಡಿದಿದ್ದಾರೆ. ಲೂಬಿನ್ ಅಮರ್ನಾಥ್ ಹಾಗೂ ವಿವೇಕ್ ಎಂಬುವರನ್ನು ಬಂಧಿಸಿ 16 ಲಕ್ಷದ ಮೌಲ್ಯದ 1.1 ಗಾಂಜಾ ಆಯಿಲ್ ವಶಪಡಿಸಿಕೊಂಡಿದ್ದಾರೆ.
ಕೇರಳದಿಂದ ಗಾಂಜಾ ಆಯಿಲ್ ತರಿಸಿಕೊಂಡು ಸಣ್ಣ ಸಣ್ಣ ಡಬ್ಬಿಗಳಲ್ಲಿ ತುಂಬಿ ಸಾವಿರಾರು ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಫೇಸ್ ಬುಕ್ ಹಾಗೂ ಮೆಸೆಂಜರ್ನಲ್ಲಿ ಗ್ರಾಹಕರನ್ನು ಬಲೆಗೆ ಬೀಳಿಸಿಕೊಂಡು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಸದ್ಯ ಆರೋಪಿಗಳ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.