ನವದೆಹಲಿ/ಬೆಂಗಳೂರು: 2023ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ಸುಮಾರು 625 ಆರೋಪಿಗಳನ್ನು ಬಂಧಿಸಿರುವ ರಾಷ್ಟ್ರೀಯ ತನಿಖಾದಳ (ಎನ್ಐಎ) ಒಟ್ಟು 55.90 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಬಂಧಿತರಿಗೆ ಶಿಕ್ಷೆ ಪ್ರಕಟವಾದ ಪ್ರಮಾಣ ಶೇ.94.70 ರಷ್ಟಿದೆ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು, ದರೋಡೆಕೋರರು, ಮಾದಕವಸ್ತು ಕಳ್ಳಸಾಗಣೆದಾರರು, ಮಾನವ ಕಳ್ಳಸಾಗಣೆದಾರರು ಮತ್ತು ಇತರ ಅಪರಾಧಿಗಳ ವಿರುದ್ಧದ ಹೋರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದಂತಾಗಿದೆ.
ಪ್ರಸಕ್ತ ವರ್ಷದಲ್ಲಿ ಎನ್ಐಎಯು ಐಸಿಸ್ ಉಗ್ರರು, ಕಾಶ್ಮೀರಿ ಮತ್ತು ಇತರ ಜಿಹಾದಿಗಳು, ದೇಶದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ-ದರೋಡೆಕೋರರ ನಂಟು ಮತ್ತು ನೆಟ್‌ವರ್ಕ್‌ಗಳು ಸೇರಿದಂತೆ ವಿವಿಧ ವರ್ಗಗಳ ಭಯೋತ್ಪಾದಕರು ಮತ್ತು ಸಂಘಟಿತ ಕ್ರಿಮಿನಲ್ ಗುಂಪುಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದೆ. ಒಟ್ಟಾವಾ ಮತ್ತು ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ಗಳ ಮೇಲಿನ ದಾಳಿಗಳು, ಹಾಗೆಯೇ ಭಾರತದ ಕಾನ್ಸುಲೇಟ್ ಜನರಲ್, ಸ್ಯಾನ್ ಫ್ರಾನ್ಸಿಸ್ಕೋ ಸೇರಿದಂತೆ ವಿದೇಶದಲ್ಲಿ ಭಾರತೀಯ ಹಿತಾಸಕ್ತಿಗಳ ವಿರುದ್ಧದ ಪಿತೂರಿಗೆ ಸಂಬಂಧಿಸಿದಂತೆ ಐವತ್ತಕ್ಕೂ ಅಧಿಕ ದಾಳಿಗಳನ್ನ ಎನ್ಐಎ ಮಾಡಿದೆ.
ಈ ವರ್ಷ 513 ಆರೋಪಿಗಳ ವಿರುದ್ಧ ಚಾರ್ಜ್ಶೀಟ್: ಕ್ರಿಮಿನಲ್ ಅತಿಕ್ರಮಣ, ವಿಧ್ವಂಸಕತೆ, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಭಾರತೀಯ ಅಧಿಕಾರಿಗಳಿಗೆ ನೋವುಂಟುಮಾಡುವ ಪ್ರಯತ್ನದ ಪ್ರಕರಣಗಳಲ್ಲಿ ಒಟ್ಟು 43 ಶಂಕಿತರನ್ನು ಎನ್ಐಎ ಗುರುತಿಸಿದೆ. ಹಾಗೆಯೇ ಸಂಚಿನ ಭಾಗವೆಂದು ಶಂಕಿಸಲಾದ 80ಕ್ಕೂ ಹೆಚ್ಚು ಜನರನ್ನ ಭಾರತದಲ್ಲಿ ವಿಚಾರಣೆ ನಡೆಸಲಾಗಿದೆ. ಅದೇ ರೀತಿ 2022ರಲ್ಲಿ 957 ದಾಳಿಗಳನ್ನ ನಡೆಸಿದ್ದ ಎನ್ಐಎ ಅಧಿಕಾರಿಗಳು, 2023ರಲ್ಲಿ 1040 ದಾಳಿಗಳನ್ನ ನಡೆಸಿದ್ದಾರೆ. 2022ರಲ್ಲಿ 459 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, 79 ಜನರಿಗೆ ಶಿಕ್ಷೆ ಪ್ರಕಟವಾಗಿತ್ತು. ಆದರೆ 2023ರಲ್ಲಿ 513 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, 74 ಜನರಿಗೆ ಶಿಕ್ಷೆ ಪ್ರಕಟವಾಗಿದೆ.
2022 ರಲ್ಲಿ ಒಟ್ಟು 37 ಆಸ್ತಿಗಳನ್ನು ಜಪ್ತಿ ಮಾಡಿದ್ದ ಎನ್ಐಎ 10.53 ಕೋಟಿ ಜಪ್ತಿ ಮಾಡಿತ್ತು. ಆದರೆ 2023 ರಲ್ಲಿ ಈ ಸಂಖ್ಯೆ 240ಕ್ಕೇರಿದ್ದು (156 ಬ್ಯಾಂಕ್ ಖಾತೆಗಳು ಸೇರಿದಂತೆ) ಒಟ್ಟು 55.90 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಇದರಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದಿಗಳು, ಸ್ಫೋಟಕ ಮತ್ತು ಇತರ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಮತ್ತು ಶಂಕಿತರಿಗೆ ಸೇರಿದ್ದ ಆಸ್ತಿ ಪಾಸ್ತಿಗಳು ಸೇರಿವೆ.