ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 211 ಹುರಿಯಾಳುಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ ಹಲವರು ಹೊಸಬರಾದರೆ, ಇನ್ನೂ ಹಲವರು 6 ರಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವವರು ಸ್ಪರ್ಧಿಸಿದ್ದಾರೆ. ಪ್ರಸ್ತುತ ವಿಧಾನಸಭೆಯ ಹಿರಿಯ ಶಾಸಕರೆಂದರೆ ಅದು ಕಾಂಗ್ರೆಸ್ನ ಆರ್ ವಿ ದೇಶಪಾಂಡೆ. ಇದಕ್ಕೂ ಮೊದಲು ಮಲ್ಲಿಕಾರ್ಜುನ ಖರ್ಗೆ ಅವರು ಸದನದ ಹಿರಿಯ ಶಾಸಕರಾಗಿದ್ದರು. ಇವರು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಶಾಸಕ ಆರ್‌ವಿ ದೇಶಪಾಂಡೆಗೆ ಮುನ್ನಡೆ: 8 ಬಾರಿ ಗೆಲುವು ಸಾಧಿಸಿ ಅತ್ಯಂತ ಹೆಚ್ಚು ಬಾರಿ ಆಯ್ಕೆ ಆದ ಶಾಸಕ ಆರ್‌ವಿ ದೇಶಪಾಂಡೆ ತಮ್ಮ ಕ್ಷೇತ್ರದಲ್ಲಿ ಮುನ್ನಡೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರು 8 ಬಾರಿ ಚುನಾವಣಾ ಕಣದಲ್ಲಿ ಗೆಲುವು ಸಾಧಿಸಿದ್ದಾರೆ. 1 ಬಾರಿಗೆ ಸೋಲು ಕಂಡಿದ್ದು, ಇದೀಗ 10 ನೇ ಬಾರಿಗೂ ಅಖಾಡದಲ್ಲಿದ್ದು, ಸುನಿಲ್ ಹೆಗಡೆ ಜೊತೆ ಪೈಪೋಟಿ ನಡೆಸಿ ಮುನ್ನಡೆ ಅನುಭವಿಸುತ್ತಿದ್ದಾರೆ. (ಈ ಬಾರಿಯೂ ಗೆದ್ದರೆ ಖರ್ಗೆ ದಾಖಲೆಯನ್ನು ಸರಿಗಟ್ಟಿದ್ದಾರೆ.) 1983 ರಿಂದ 1994 ರವರೆಗೆ ಜನತಾ ಪರಿವಾರದಿಂದ ಸ್ಪರ್ಧಿಸಿ 4 ಬಾರಿ ಶಾಸಕರಾಗಿದ್ದರು. 1999 ರಲ್ಲಿ ಕಾಂಗ್ರೆಸ್ ಸೇರಿದರು. 2004, 2013, 2018 ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 2008 ರಲ್ಲಿ ಒಮ್ಮೆ ಮಾತ್ರ ಶಿಷ್ಯ ಸುನೀಲ್ ಹೆಗಡೆ ವಿರುದ್ಧ ಸೋಲು ಕಂಡಿದ್ದರು. ಮಲ್ಲಿಕಾರ್ಜುನ್ ಖರ್ಗೆ ಬಳಿಕ ಸದನದಲ್ಲಿ ಹೆಚ್ಚು ಬಾರಿ ಆಯ್ಕೆಯಾದ ಹಿರಿಯ ಸದಸ್ಯರಾಗಿದ್ದಾರೆ. 1999 ರಲ್ಲಿ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಹಾಗೂ 1996-1999 ರವರೆಗಿನ ಜನತಾ ದಳ ಸರ್ಕಾರದ ಅವಧಿಯಲ್ಲೂ ಭಾರಿ ಕೈಗಾರಿಕ ಸಚಿವರಾಗಿದ್ದರು, ಅದಾದ ಬಳಿಕ ಧರ್ಮಸಿಂಗ್, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲೂ ಆರ್‌ವಿ ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ದರು.
ಸಿದ್ದರಾಮಯ್ಯ ಮುನ್ನಡೆ: ಕಾಂಗ್ರೆಸ್ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರನ್ನು ಹಿಂದಿಕ್ಕಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು 10 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಉಪಚುನಾವಣೆ ಸೇರಿ 8 ಬಾರಿ ಗೆಲುವು ಸಾಧಿಸಿದ್ದಾರೆ. ಉಪ ಚುನಾವಣೆಯಲ್ಲಿ 253 ಮತಗಳಿಂದ ಶಿವಬಸಪ್ಪ ವಿರುದ್ಧ ಗೆಲುವು ಕಂಡಿದ್ದರು. ಇದಲ್ಲದೇ, ವಿಧಾನಸಭಾ ರಾಜಕೀಯ ಜೀವನದಲ್ಲಿ ಒಟ್ಟು ಮೂರು ಬಾರಿ ಸೋಲು (1989- 1999, 2018 ಚಾಮುಂಡೇಶ್ವರಿ) ಕಂಡಿದ್ದಾರೆ. ಕಳೆದ 2018 ಚುನಾವಣೆಯಲ್ಲಿ ಬಾದಾಮಿಯಲ್ಲಿ ಗೆದ್ದರೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದರು. ಸಿಎಂ ಸ್ಥಾನದಲ್ಲಿದ್ದಾಗಲೇ ತಮ್ಮ ಸ್ವ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುಂಡಿದ್ದು ವಿಶೇಷ. ಆದರೆ, ಬಾದಾಮಿಯಲ್ಲಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಸಲ ಸಿದ್ದರಾಮಯ್ಯ ವರುಣದಲ್ಲಿ ಮಾತ್ರವೇ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ತುರುಸಿನ ಸ್ಪರ್ಧೆ ಒಡ್ಡಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನೇನು ಅಂತಿಮ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ. ಸಿದ್ದರಾಮಯ್ಯ ಗೆಲುವು ಸಾಧಿಸಿದರೆ, ಒಟ್ಟು 9 ಬಾರಿ ಗೆದ್ದದಂತಾಗುತ್ತದೆ. ಈ ಮೂಲಕ ವಿಧಾನಸಭೆಯಲ್ಲಿ ಅತಿ ಹೆಚ್ಚು ಸೇವೆ ಸಲ್ಲಿಸಿದ ಶಾಸಕರಲ್ಲಿ ಒಬ್ಬರಾಗಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆಲುವು: ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಈವರೆಗೂ 8 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. 1989 ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 1999 ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ 56 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. 2008 ರಿಂದ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಗೆಲ್ಲುತ್ತಾ ಬಂದಿದ್ದಾರೆ. ಈ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ್ ಭರ್ಜರಿ ಗೆಲುವು ಸಾಧಿಸಿದ್ರೆ, ಸತತ ಎಂಟನೆ ಬಾರಿಗೆ ಚುನಾವಣೆಯಲ್ಲಿ ಆಯ್ಕೆ ಆದಂತಾಗುತ್ತದೆ. ಎಸ್ ಬಂಗಾರಪ್ಪ, ಎಸ್ ಎಂ ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಅನುಭವ ಡಿ ಕೆ ಶಿವಕುಮಾರ್ ಅವರಿಗೆ ಇದೆ.
ಜಗದೀಶ್ ಶೆಟ್ಟರ್ ಹಿನ್ನಡೆ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಹಿನ್ನಡೆ ಅನುಭವಿಸುತ್ತಿದ್ದಾರೆ. ಶೆಟ್ಟರ್ 6 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. 2023 ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ 7 ನೇ ಬಾರಿ ಆಯ್ಕೆ ಬಯಸಿ ಕಾಂಗ್ರೆಸ್ನಿಂದ ಕಣದಲ್ಲಿದ್ದಾರೆ. ಸಚಿವ, ವಿಧಾನಸಭೆ ಸ್ಪೀಕರ್, ವಿಧಾನಸಭೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. 1994 ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಬಾರಿ ಕ್ಷೇತ್ರ ಅದೇ ಆದರೆ ಪಕ್ಷ ಮಾತ್ರ ಬೇರೆ.
ಮಾಜಿ ಸ್ಪೀಕರ್ ರಮೇಶ್ಕುಮಾರ್ ಹಿನ್ನಡೆ: 6 ಬಾರಿ ಶಾಸಕರಾಗಿರುವ ಕೆ ಆರ್ ರಮೇಶ್ ಕುಮಾರ್ ಹಿನ್ನಡೆಯಲ್ಲಿದ್ದಾರೆ. ಸಚಿವರು, ಮಾಜಿ ಸ್ಪೀಕರ್ ಆಗಿರುವ ಕೆ.ಆರ್. ರಮೇಶ್ಕುಮಾರ್ ಅವರು 1978 ರಿಂದ ಚುನಾವಣಾ ರಾಜಕೀಯದಲ್ಲಿದ್ದಾರೆ. 1978 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. ಇದಾದ ಬಳಿಕ 1983 ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದರು. 1985 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1989 ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತರು. 1994 ರಲ್ಲಿ ಜನತಾ ದಳದಿಂದ ಗೆದ್ದು, ಸ್ಪೀಕರ್ ಆಗಿ ಆಯ್ಕೆಯಾದರು. 1999 ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಸೋಲು ಕಂಡರು. 2004 ರಲ್ಲಿ ಮತ್ತೆ ಕಾಂಗ್ರೆಸ್ ಸೇರಿ ಸತತವಾಗಿ ಗೆಲುತ್ತಾ ಬಂದಿದ್ದಾರೆ.
ವಿಶ್ವೇಶ್ವರ ಹೆಗೆಡೆ ಕಾಗೇರಿ ಮುನ್ನಡೆ: 6 ಬಾರಿ ಶಾಸಕರಾಗಿರುವ ವಿಧಾನಸಭೆ ಸ್ಪೀಕರ್ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. 1994, 1999, 2004, 2008, 2013, 2018 ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ.
ಹೆಚ್ಡಿ ರೇವಣ್ಣ ಮುನ್ನಡೆ: 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೆಚ್. ಡಿ. ರೇವಣ್ಣ ಮುನ್ನಡೆ ಕಾಯ್ದುಕೊಂಡಿದ್ದಾರೆ. 1999, 2004, 2008, 2013 ಮತ್ತು 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಒಟ್ಟು ಆರು ಬಾರಿ ಶಾಸಕರಾಗಿ ಕೆಲಸ ಮಾಡಿರುವ ಅನುಭವ ಅವರಿಗಿದೆ. ಇವರು ಸಹ 7 ನೇ ಬಾರಿ ಹೊಳೆನರಸೀಪುರದಿಂದಲೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಮುನ್ನಡೆ ಕಾಯ್ದುಕೊಂಡಿದ್ದಾರೆ.