ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ವರುಣಾರ್ಭಟಕ್ಕೆ 48ಕ್ಕೂ ಅಧಿಕ ಮಂದಿ ಸಾವು : ಜಲಮಯವಾಯ್ತು ಸಾವಿರಾರು ಜನರ ಬದುಕು! - CM Yadiyurappa

ರಾಜ್ಯದಲ್ಲಿ ಪ್ರವಾಹಕ್ಕೆ ಅಕರಶಃ ಕರುನಾಡ ಜನತೆ ತತ್ತರಿಸಿ ಹೋಗಿದ್ದಾರೆ. ಮನೆ ಮಠ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇನ್ನು ಮಳೆಯ ಪ್ರಮಾಣ ಸ್ವಲ್ಪ ಇಳಿಕೆಯಾಗಿರುವ ಪರಿಣಾಮ ನೆರೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.

ಕರ್ನಾಟಕದಲ್ಲಿ ಪ್ರವಾಹ

By

Published : Aug 12, 2019, 9:49 PM IST

Updated : Aug 12, 2019, 10:44 PM IST

ಬೆಂಗಳೂರು: ರಾಜ್ಯವನ್ನು ಭಾರಿ ಸಂಕಷ್ಟಕ್ಕೆ ದೂಡಿರುವ ವರುಣ ಸ್ವಲ್ಪ ಮಟ್ಟಿಗೆ ಬಿಡುವು ಕೊಟ್ಟಿದ್ದಾನೆ. ಮಳೆ ಪ್ರಮಾಣ ಇಳಿಕೆಯಾಗಿರುವ ಪರಿಣಾಮ ಉತ್ತರ ಕನ್ನಡ, ಮಲೆನಾಡು, ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ನೆರೆ ಪರಿಸ್ಥಿತಿ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.

ಪ್ರವಾಹದಿಂದ ಆಗಿರುವ ಹಾನಿಯ ಅಂದಾಜು 4.30 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, 48 ಮಂದಿ ಸಾವನ್ನಪ್ಪಿದ್ದಾರೆ. 12 ಮಂದಿ ನಾಪತ್ತೆಯಾಗಿದ್ದಾರೆ. 548 ಜಾನುವಾರುಗಳು ಅಸುನೀಗಿವೆ. 17 ಜಿಲ್ಲೆಯಲ್ಲಿ 86 ತಾಲೂಕಿನ 2738 ಹಳ್ಳಿಗಳು ಜಲಾವೃತವಾಗಿವೆ. 6,73,559 ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. 1224 ಪರಿಹಾರ ಕೇಂದ್ರ ಆರಂಭಿಸಲಾಗಿದೆ. ಇದರಲ್ಲಿ 3,93,956 ಜನರಿಗೆ ಆಶ್ರಯ ನೀಡಲಾಗಿದೆ. 50,595 ಜಾನುವಾರುಗಳ ರಕ್ಷಣೆ ಮಾಡಲಾಗಿದ್ದು, 32,305 ಜಾನುವಾರುಗಳು ಪರಿಹಾರ ಕೇಂದ್ರದಲ್ಲಿವೆ. ಪ್ರವಾಹದಿಂದ ಇದುವರೆಗೆ ಅಂದಾಜು 40523 ಮನೆಗಳಿಗೆ ಹಾನಿಯಾಗಿದೆ.

ಬೆಳಗಾವಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎನ್​ಡಿಆರ್​ಎಫ್​ನ 19 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಕಾಲಮ್ ಆಫ್ ಆರ್ಮಿ 17 ಕೆಲಸ ಮಾಡುತ್ತಿದ್ದು, ಬೆಳಗಾವಿಗೆ 11 ಕಾಲಮ್ ಆಫ್ ಆರ್ಮಿ, ಬಾಗಲಕೋಟೆ, ರಾಯಚೂರು, ಕೊಡುಗು, ಶಿವಮೊಗ್ಗ, ಯಾದಗಿರಿ, ಕಲಬುರಗಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಸೇನಾ ಕಾಲಮ್ ಕಾರ್ಯನಿರ್ವಹಿಸುತ್ತಿವೆ. 4 ಹೆಲಿಕಾಪ್ಟರ್, ಒಂದು ಗರುಡಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ರಾಜ್ಯದಲ್ಲಿ ವರುಣಾರ್ಭಟಕ್ಕೆ 48ಕ್ಕೂ ಅಧಿಕ ಮಂದಿ ಸಾವು

ಕಳೆದ 12 ದಿನಗಳಿಂದ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿದ ಮಳೆ, ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಸೂರು ಕಳೆದುಕೊಂಡವರು ಆಸರೆಗಾಗಿ ಜನಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಬಾಗಲಕೋಟೆ, ಬೆಳಗಾವಿ, ರಾಯಚೂರು, ಯಾದಗಿರಿ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳು ಅಕ್ಷರಶಃ ಮಳೆಯ ಹೊಡೆತಕ್ಕೆ ನಲುಗಿ ಹೋಗಿದ್ದು, ಲಕ್ಷಾಂತರ ಜನ ಮನೆಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ರಾಜಧಾನಿ ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ ಅಗತ್ಯ ವಸ್ತುಗಳನ್ನು ದಾನಿಗಳಿಂದ ಸಂಗ್ರಹಿಸಿ, ಸಂತ್ರಸ್ತರಿಗೆ ನೀಡಲಾಗುತ್ತಿದೆ. ನೆರೆ ಇಳಿದರೂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಶುಚಿತ್ವದ ಕೊರತೆ ಕಾಡುತ್ತಿದೆ. ಸತ್ತ ಪ್ರಾಣಿಗಳು, ಕೊಳೆತ ವಸ್ತುಗಳು, ಕೆಸರಿನಡಿ ಸಿಲುಕಿರುವ ಶವಗಳಿಂದಲೂ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಕೆಲವೆಡೆ ಪ್ರವಾಹ ತಗ್ಗಿದ್ದರೂ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಭಾರೀ ಪ್ರಮಾಣದಲ್ಲಿ ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಇಂದೂ ಕೂಡ ಹಲವು ಗ್ರಾಮಗಳು ಜಲಾವೃತವಾಗಿವೆ. ಮಾನ್ವಿ ತಾಲೂಕಿನ ನದಿ ದಂಡೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮಂತ್ರಾಲಯದ ಕಡೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಬಾಗಲಕೋಟೆಯಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಮತ್ತೂರು, ಕಡಕೋಳ ಗ್ರಾಮಗಳು ಜಲಾವೃತಗೊಂಡಿದೆ. ಮತ್ತೊಂದೆಡೆ ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ಮಳೆ ಸೃಷ್ಠಿಸಿರುವ ಅವಾಂತರದಿಂದ ಜನಜೀವನ ಯಥಾಸ್ಥಿತಿಗೆ ಬರಲು ಸಾಧ್ಯವಾಗಿಲ್ಲ. ಚಾರ್ಮಾಡಿ, ಶಿರಾಡಿ ಘಾಟ್​​ಗಳಲ್ಲಿ ಮತ್ತೆ ಗುಡ್ಡ ಕುಸಿದು ರಸ್ತೆ ಸಂಪರ್ಕಕ್ಕೆ ಅಡಚಣೆಯಾಗಿದೆ. ಕೆಆರ್​ಎಸ್ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ರಾಜ್ಯದ ವಿವಿಧೆಡೆ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹೊಸ ಮನೆ ಕಟ್ಟಿಕೊಡಲು ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. 16 ಜಿಲ್ಲೆಗಳಲ್ಲಿ ಭಾರೀ ನಷ್ಟ ಸಂಭವಿಸಿದೆ. ಈಗಿನ ಅಂದಾಜಿನ ಪ್ರಕಾರ 31,800 ಮನೆಗಳು ಹಾನಿಗೊಳಗಾಗಿವೆ. ಮನೆ ನಿರ್ಮಿಸಲು ತಾತ್ಕಾಲಿಕವಾಗಿ ಮೊದಲ ಹಂತದಲ್ಲಿ 1 ಲಕ್ಷ, ಮುಂದಿನ ಹಂತದಲ್ಲಿ 4 ಲಕ್ಷ ಸೇರಿದಂತೆ ಮನೆ ಕಟ್ಟಿಕೊಳ್ಳಲು ಸರ್ಕಾರ 5 ಲಕ್ಷ ಪರಿಹಾರ ನೀಡಲಿದೆ ಎಂದು ಬಿಎಸ್​​ವೈ ದಕ್ಷಿಣ ಕನ್ನಡದಲ್ಲಿ ತಿಳಿಸಿದ್ದಾರೆ.

Last Updated : Aug 12, 2019, 10:44 PM IST

ABOUT THE AUTHOR

...view details