ಬೆಂಗಳೂರು: ರಾಜ್ಯದಲ್ಲಿ ಜಾತಿ ಆಧಾರಿತ ನಿಗಮ-ಮಂಡಳಿಗಳ ಸ್ಥಾಪನೆ ಪ್ರಶ್ನಿಸಿ ವಕೀಲ ಎಸ್.ಬಸವರಾಜ್ ಹಾಗೂ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ್ದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಅಕ್ಟೋಬರ್ 21 ರಂದು ಅನುದಾನದ ವಿವರ ನೀಡುವಂತೆ ನಿರ್ದೇಶಿಸಿತ್ತು. ಆ ಪ್ರಕಾರ ಸರ್ಕಾರದ ಪರ ವಕೀಲರು ಜಾತಿ ಆಧಾರಿತ ನಿಗಮ ಮಂಡಳಿಗೆ ಸರ್ಕಾರ ಮಂಜೂರು ಮಾಡಿದ ಒಟ್ಟು ಹಣ ಹಾಗೂ ಅದರಲ್ಲಿ ನಿಗಮ ಮಂಡಳಿಗಳು ವ್ಯಯಿಸಿರುವ ಹಣದ ವಿವರಗಳನ್ನು ಪೀಠಕ್ಕೆ ಸಲ್ಲಿಸಿದರು.
ವಿಚಾರಣೆ ವೇಳೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪರ ವಕೀಲರು ವಾದಿಸಿ, ಯಡಿಯೂರಪ್ಪ ಸಿಎಂ ಹುದ್ದೆಯಿಂದ ನಿರ್ಗಮಿಸುವ ಮುನ್ನ ಜನವರಿ 19 ರಂದು ರಾಜ್ಯದಲ್ಲಿ ಶೇ.13ರಷ್ಟು ಮತ ಪ್ರಮಾಣ ಹೊಂದಿರುವ ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ಮಂಡಳಿ ರಚಿಸಿ ಆದೇಶ ಮಾಡಿದ್ದರು. ಅದರಂತೆ ಜಾತಿ ಆಧಾರಿತ ನಿಗಮ ಮಂಡಳಿಗಳನ್ನು ರಚಿಸಿ ಅವುಗಳಿಗೆ ಅನುದಾನ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮಂಡಳಿಗಳಿಗೆ ತಮ್ಮ ರಾಜಕಾರಣಿಗಳ ಬೆಂಬಲಿಗರು ಹಾಗೂ ಸಂಬಂಧಿಗಳನ್ನು ಸದಸ್ಯರನ್ನಾಗಿ, ಸಿಬ್ಬಂದಿಯಾಗಿ ನೇಮಿಸಲಾಗುತ್ತಿದೆ. ಹೀಗಾಗಿ ಪ್ರಕರಣವನ್ನು ತುರ್ತಾಗಿ ಆಲಿಸಬೇಕು. ಇಂದೇ ವಿಚಾರಣೆ ಆರಂಭಿಸಿದರೂ ವಾದ ಮಂಡನೆಗೆ ಸಿದ್ಧವೆಂದು ತಿಳಿಸಿದರು.
ಸರ್ಕಾರದ ಪರ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಹಿಂದಿನ ನ್ಯಾಯಮೂರ್ತಿಗಳು 20 ದಿನಗಳಿಗೂ ಹೆಚ್ಚು ಕಾಲ ನಿರಂತರವಾಗಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಸರ್ಕಾರವು ಸಮಗ್ರವಾದ ಆಕ್ಷೇಪಣೆ ಸಿದ್ಧಪಡಿಸಿದೆ. ನವೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ವಿಚಾರಣೆ ನಡೆಸಿದರೆ ವಾದ ಮಂಡಿಸಲಾಗುವುದು ಎಂದರು. ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಪರ ವಕೀಲರು, ಮೊದಲಿಗೆ ಅರ್ಜಿಗಳು ವಿಚಾರಣೆ ಮಾನ್ಯತೆಯನ್ನೇ ಹೊಂದಿಲ್ಲ. ಅರ್ಜಿ ಕುರಿತು ಸಂವಿಧಾನದ ವಿವಿಧ ಪರಿಚ್ಛೇದಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳಿವೆ ಎಂದರು.