ಬೆಂಗಳೂರು:ಕೆ.ಜಿ. ಹಳ್ಳಿ ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಠಾಣೆ ಹಾಗೂ ಠಾಣೆಯ ವಸ್ತುಗಳು ಜಖಂ ಆದ ಕಾರಣ ಸಮಾಜ ಕಾಯುವ ಖಾಕಿ ಪಡೆ ಸದ್ಯ ಕಿಡಿಗೇಡಿಗಳನ್ನ ಮಟ್ಟ ಹಾಕಿ ಶಿಕ್ಷೆ ಕೊಡಿಸಲೇಬೇಕೆಂದು ಪಣತೊಟ್ಟು ನಿಂತಿದ್ದಾರೆ. ಘಟನೆ ನಡೆದ ರಾತ್ರಿಯಿಂದ ನಿದ್ದೆ ಬಿಟ್ಟು ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಸಿಸಿಟಿವಿ ವಿಡಿಯೋ ಪರಿಶೀಲನೆ:
ಘಟನೆ ರಾತ್ರಿ ನಡೆದಿರುವ ಕಾರಣ ಕತ್ತಲೆಯಾಗಿತ್ತು. ಹಾಗೆ ಬೆಂಕಿಯ ಕೆನ್ನಾಲಿಗೆ, ಪೆಟ್ರೋಲ್, ಗ್ಯಾಸ್ ಹೊಗೆ ಇದ್ದ ಕಾರಣ ಸ್ಥಳದಲ್ಲಿ ಸಂಪೂರ್ಣ ವಾತಾವರಣ ಕಲುಷಿತವಾಗಿತ್ತು. ಸದ್ಯ ಪೊಲೀಸರಿಗೆ ಆರೋಪಿಗಳನ್ನ ಮಟ್ಟ ಹಾಕಲು ಸಿಸಿಟಿವಿ ಹಾಗೂ ವಿಡಿಯೋಗಳೇ ಪ್ರಮುಖ ಅಸ್ತ್ರವಾಗಿವೆ. ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡುವ ಜವಾಬ್ದಾರಿ ಹೊತ್ತ ಡಾ. ಶರಣಪ್ಪ ಅವರು ಪೂರ್ವ ವಿಭಾಗದ ವ್ಯಾಪ್ತಿಯ ಪ್ರತಿ ಏರಿಯಾದ ಸಿಸಿಟಿವಿಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಈಗಾಗಲೇ ಪೊಲೀಸರ ಮಾಹಿತಿ ಪ್ರಕಾರ ಆರೋಪಿಗಳು ಜೆ.ಸಿ. ನಗರ ಆರ್.ಟಿ. ನಗರ ಹೀಗೆ ಬೇರೆ ಬೇರೆಕಡೆಯಿಂದ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಠಾಣೆ ಬಳಿ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಗಲ್ಲಿ ಗಲ್ಲಿಗಳಲ್ಲಿರುವ ಅಂಗಡಿ, ಪ್ರಮುಖ ಸಿಗ್ನಲ್ ಬಳಿ ಇರುವ ಸಿಸಿಟಿವಿಗಳ ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ. ಸಂಜೆ ನಾಲ್ಕು ಗಂಟೆಯ ನಂತರ ಓಡಾಡಿದ ಚಲನವಲನಗಳ ದೃಶ್ಯದ ಆಧಾರದ ಮೇರೆಗೆ ಆರೋಪಿಗಳನ್ನ ಮಟ್ಟ ಹಾಕುತ್ತಿದ್ದಾರೆ.
ಪ್ರಕರಣ ತನಿಖೆಗೆ ವಿಶೇಷವಾಗಿ ವರ್ಗೀಕರಣ ಮಾಡಿ ತಂಡ ರಚನೆ:
ಘಟನೆಯ ಇಂಚಿಂಚೂ ಮಾಹಿತಿಯನ್ನ ಕಲೆಹಾಕಬೇಕೆಂದು ಪೊಲೀಸರು ತನಿಖೆಯ ಹಂತವನ್ನ ಒಬ್ಬೊಬ್ಬರಿಗೆ ವರ್ಗೀಕರಣ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ಸಿಬ್ಬಂದಿಯನ್ನ ಬಳಸಿಕೊಂಡು ಟೆಕ್ನಿಕಲ್ ಟೀಮ್, ಸಿಸಿಟಿವಿ ಮತ್ತು ವಿಡಿಯೋ, ಅರೆಸ್ಟಿಂಗ್ ಟೀಮ್, ಇಂಟರಾಗೇಶನ್ ಟೀಮ್, ಪೇಪರ್ ವರ್ಕ್ ನೋಡಿಕೊಳ್ಳಲು ಒಂದು ತಂಡ.. ಹೀಗೆ ಬೇರೆ ಬೇರೆ ಮಾದರಿಯ ಕೆಲಸ ಮಾಡಲು ತಂಡಗಳನ್ನು ರಚಿಸಲಾಗಿದೆ.
ವಿಡಿಯೋ ಮತ್ತು ಫೊಟೋಗಳನ್ನು ನೋಡಿ ಗುರುತು ಪತ್ತೆ:
ಟೆಕ್ನಿಕಲ್ ಟೀಮ್ ಸಹಯಾದಿಂದ ಅರೋಪಿಗಳು ಎಲ್ಲಿದ್ದಾರೆ ಎನ್ನುವುದನ್ನು ಲೊಕೇಟ್ ಮಾಡಲಾಗುತ್ತಿದೆ. ನಂತರ ಪಕ್ಕಾ ಪ್ಲಾನ್ ಮಾಡಿ ಒಬ್ಬೊಬ್ಬ ಅರೋಪಿಗಳನ್ನು ಹುಡುಕಿ ಹೆಡೆಮುರಿಕಟ್ಟಲಾಗುತ್ತಿದೆ. ಟೆಕ್ನಿಕಲ್ ಟೀಮ್ ಈಗಾಗಲೇ ಟವರ್ ಡಂಪ್ ಮಾಡಿ, ಘಟನೆ ಸಮಯದಲ್ಲಿ ಯಾವೆಲ್ಲಾ ಮೊಬೈಲ್ ನಂಬರ್ಗಳು ಘಟನಾ ಸ್ಥಳಕ್ಕೆ ಬಂದಿವೆ. ಸ್ಥಳಕ್ಕೆ ಬಂದು ಎಷ್ಟು ಸಮಯದ ನಂತರ ಬೇರೆ ಕಡೆಗೆ ಪರಾರಿಯಾಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ.
ಸಾವಿರಾರು ಮೊಬೈಲ್ ಲೊಕೇಷನ್ ಪತ್ತೆ:
ಘಟನೆ ನಡೆದ ಸ್ಥಳದಲ್ಲಿ ಈಗಾಗಲೇ ಸಾವಿರಾರು ಮೊಬೈಲ್ ನಂಬರ್ ಲೋಕೇಷನ್ ಪತ್ತೆಯಾಗಿವೆ. ಆರೋಪಿಗಳು ಫೇಸ್ ಬುಕ್ ,ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್, ವಿ ಚಾಟ್ ಸೇರಿ ಬೇರೆ ಬೇರೆ ಸಾಮಾಜಿಕ ಜಾಲ ತಾಣದ ಮೂಲಕ ಜನರನ್ನು ಸೇರಿಸಿದ್ರು. ಹೀಗಾಗಿ ಸಾಮಾಜಿಕ ಜಾಲತಾಣಗಳನ್ನು ತಡಕಾಡಿ ಆರೋಪಿಗಳ ಪಟ್ಟಿ ಮಾಡಲಾಗುತ್ತಿದೆ. ಈಗಾಗಲೇ ಸಾವಿರಾರು GB ವಿಡಿಯೋಗಳನ್ನು ಸಂಗ್ರಹಿಸಿದ್ದಾರೆ. ಕಲ್ಲು ಬೀಸಿದ್ದ ಒಬ್ಬ ಕೂಡ ತಪ್ಪಿಸಿಕೊಳ್ಳದಂತೆ ಮಾಸ್ಟರ್ ಪ್ಲಾನ್ ಮಾಡಿಯೇ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಪತ್ತೆ ಮಾಡಿ ಆರೋಪಿಗಳಿಗೆ ಡ್ರಿಲ್: ಆರೋಪಿಗಳನ್ನ ಬಂಧಿಸಿ ಠಾಣೆಗೆ ಕರೆತಂದ ಕೂಡಲೇ ಒಂದು ಸುತ್ತಿನ ವಿಚಾರಣೆ ನಡೆಸಲಾಗುತ್ತೆ. ಈ ವಿಚಾರಣೆಯಲ್ಲಿ ಆರೋಪಿ ಜೊತೆ ಯಾರಿದ್ದರು ಎನ್ನುವುದನ್ನು ಬಾಯ್ಬಿಡಿಸಲಾಗುತ್ತಿದೆ. ತಕ್ಷಣ ಆರೋಪಿ ನೀಡಿದ ಮಾಹಿತಿ ಮೇರೆಗೆ ಮತ್ತಷ್ಟು ಜನರನ್ನು ಬಂಧಿಸಲಾಗುತ್ತೆ. ಆರೋಪಿಗಳು ಯಾವ ಸಂಘಟನೆಯ ಪರವಾಗಿದ್ದರು, ಯಾರಿಂದ ಪ್ರಚೋದನೆಗೆ ಒಳಗಾಗಿದ್ದರು ಅಥವಾ ಇವರುಗಳು ಅದೆಷ್ಟು ಜನರಿಗೆ ಪ್ರಚೋದನೆ ಕೊಡುತ್ತಿದ್ದರು. ಹೀಗೆ ಹಲವು ಅಯಾಮದಲ್ಲಿ ವಿಚಾರಣೆ ನಂತ್ರ ಇಂಟರಾಗೇಶನ್ ಟೀಮ್ ಆರೋಪಿಗಳನ್ನು ಪೇಪರ್ ವರ್ಕ್ ಟೀಮ್ಗೆ ನೀಡುತ್ತಾರೆ. ಪೇಪರ್ ವರ್ಕ್ ಸಹ ಬಹಳ ಪ್ರಮುಖ ಅರೋಪಿಗಳ ಫಿಂಗರ್ ಪ್ರಿಂಟ್, ಹೆಸರು, ಫೋಟೋ ಮತ್ತು ಇತರ ಮಾಹಿತಿ ಪಡೆದು ಅಧಿಕೃತವಾಗಿ ಬಂಧಿಸಲಾಗುತ್ತೆ.
ಹಗಲಲ್ಲಿ ಸಿಗದ ಆರೋಪಿಗಳಿಗೆ ತಂಡ ರಾತ್ರಿ ಶೋಧ:
ಗಲಭೆ ನಡೆಸಿದ ಪುಂಡರು ಬಹಳ ಚಾಣಕ್ಯರಾಗಿದ್ದಾರೆ. ತಮ್ಮನ್ನು ಬಂಧಿಸುತ್ತಾರೆ ಅನ್ನೋ ಕಾರಣಕ್ಕಾಗಿ ಹಗಲಲ್ಲಿ ತಲೆಮರೆಸಿಕೊಂಡು, ರಾತ್ರಿ ವೇಳೆ ಮನೆಯಲ್ಲಿ ನಿದ್ದೆಗೆ ಜಾರಿರುತ್ತಿದ್ದರು. ಇದೇ ಸಮಯವನ್ನ ಬಳಕೆ ಮಾಡಿಕೊಂಡು ಪೊಲೀಸರು ರಾತ್ರಿ ವೇಳೆ ಏಕಾಏಕಿ ಮನೆ ಬಾಗಿಲು ಬಡಿದು ದಾಳಿ ನಡೆಸುತ್ತಿದ್ದಾರೆ.
ಸಿಸಿಬಿಯಿಂದ ಪ್ರಮುಖ ಆರೋಪಿಗಳ ತನಿಖೆ:
ಸದ್ಯ ಪ್ರಕರಣದಲ್ಲಿ ಎಸ್ಡಿಪಿಐ ಕೈವಾಡ ಇರುವುದು ತನಿಖೆಯಲ್ಲಿ ಗೊತ್ತಾದ ಕಾರಣ ಪ್ರಮುಖ ಆರೋಪಿಗಳಾದ ಎಸ್ಡಿಪಿಐ ಮುಖಂಡ ಮುಜಾಮಿಲ್ ಪಾಷಾ, ಫೈರೋಜ್, ಇಮ್ರಾನ್, ಕಲೀಂ ಪಾಷಾ ಇನ್ನಿತರ ಆರೋಪಿಗಳನ್ನ ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಯಲ್ಲಿ ತನಿಖೆಗೆ ಒಳಪಡಿಸಿದ್ದಾರೆ. ಈ ಆರೋಪಿಗಳ ಬಳಿಯಿಂದ ಹೆಚ್ಚಿನ ಮಾಹಿತಿಯನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೆ ಡಿಸಿಪಿ ಕುಲ್ದೀಪ್ ಜೈನ್ ಅವರು ಪಡೆಯುತ್ತಿದ್ದಾರೆ.
ನವೀನ್ ತನಿಖೆ ಚುರುಕು:
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ನವೀನ್ ತನಿಖೆಯನ್ನ ಚುರುಕುಗೊಳಿಸಿದ್ದಾರೆ. ನವೀನ್ನನ್ನು ನ್ಯಾಯಾಲಯ ಐದು ದಿನಗಳ ಕಾಲ ಮಾತ್ರ ಪೊಲೀಸ್ ಕಸ್ಟಡಿಗೆ ನೀಡಿದೆ. ಸದ್ಯ ನಾಳೆ ಕಸ್ಟಡಿ ಕೊನೆಗೊಳ್ಳುವ ಕಾರಣ ಮತ್ತೆ ನ್ಯಾಯಾಲಯದ ಎದುರು ಹಾಜರುಪಡಿಸಲಿದ್ದಾರೆ. ಹೀಗಾಗಿ ತನಿಖೆಯ ದೃಷ್ಟಿಯಿಂದ ಬೇಕಾದ ಮಾಹಿತಿಗಳನ್ನು ಸಿಸಿಬಿ ಡಿಸಿಪಿ ರವಿಕುಮಾರ್ ಅವರು ಪಡೆಯುತ್ತಿದ್ದಾರೆ.