ಬೆಂಗಳೂರು: ರಾಜ್ಯದಲ್ಲಿ ಕೃಷಿಯನ್ನು ಸುಸ್ಥಿರಗೊಳಿಸುವುದರ ಜೊತೆಗೆ ಆರ್ಥಿಕವಾಗಿ ಲಾಭದಾಯಕ ಉದ್ಯೋಗವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಒದಗಿಸಿದೆ. ಸಣ್ಣ, ಮಧ್ಯಮ ಹಾಗೂ ಮಹಿಳಾ ರೈತರ ಜೀವನ ಮಟ್ಟ ಹಾಗೂ ಆದಾಯ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಮಾರು 15 ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಿವೆ. ಇದರಲ್ಲಿ ಪ್ರಮುಖವಾದವುಗಳೆಂದರೆ,
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ : ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ತಲಾ 2 ಸಾವಿರ ರೂ.ನಂತೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ 6 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಈ ಯೋಜನೆಯ ವಾರ್ಷಿಕ 6 ಸಾವಿರ ರೂ.ಗೆ ಎರಡು ಕಂತುಗಳಲ್ಲಿ 4 ಸಾವಿರ ರೂ. ಹೆಚ್ಚುವರಿಯಾಗಿ ನೀಡಲು ಘೋಷಿಸಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ: ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ರೈತರಿಗೆ ಪರಿಹಾರ ನೀಡಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರೈತರು ಬೆಳೆ ವಿಮೆ ಮಾಡಿಸಿದರೆ ಮಳೆ, ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ ರೈತರಿಗೆ ಪರಿಹಾರ ನೀಡಲಾಗುವುದು. ಬೆಳೆ ಸಾಲ ಮಾಡಿದ ರೈತರಿಗೆ ಬೆಳೆ ವಿಮೆ ಕಡ್ಡಾಯಗೊಳಿಸಲಾಗಿದೆ. ಸಾಲ ಪಡೆಯದ ರೈತರು ಅಧಿಸೂಚಿತ ಘಟಕದಡಿ ಬೆಳೆಗಳಿಗೆ ನಿಗದಿತ ಅವಧಿಯೊಳಗೆ ಪ್ರಿಮಿಯಂ ಮೊತ್ತ ಪಾವತಿಸಿ ಬೆಳೆ ವಿಮೆ ಮಾಡಿಸಿಕೊಳ್ಳಬಹುದು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ :ರೈತರ ಜಮೀನಿನಲ್ಲಿ ನೀರು ಪೋಲಾಗುವುದನ್ನು ತಡೆಯುವುದಕ್ಕಾಗಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕ ಹಾಗೂ ಹನಿ ನೀರಾವರಿ ಘಟಕಗಳಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತಿದೆ.
ಕೃಷಿ ಭಾಗ್ಯ ಯೋಜನೆ: ಮಳೆ ನೀರಿನ ಸಮರ್ಥ ಬಳಕೆ ಮತ್ತು ಸಂರಕ್ಷಿತ ನೀರಾವರಿಗೆ ತನ್ಮೂಲಕ ಸುಧಾರಿತ ಬೆಳೆ ಉತ್ಪಾದನಾ ಪದ್ದತಿ ಅಳವಡಿಸಲು ರೈತರನ್ನು ಪ್ರೋತ್ಸಾಹಿಸಲು ಕೃಷಿ ಭಾಗ್ಯ ಯೋಜನೆಯಡಿ ಪ್ಯಾಕೇಜ್ ರೂಪದಲ್ಲಿ ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಪಂಪ್ ಸೆಟ್, ಲಘು ನೀರಾವರಿ ಘಟಕ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆ ಘಟಕಗಳಿಗೆ ಸಹಾಯಧನ ನೀಡಲಾಗುತ್ತದೆ.
ಕೃಷಿ ಯಂತ್ರಧಾರೆ : ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಎಲ್ಲ ಜಿಲ್ಲೆಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಕಡಿಮೆ ಬಾಡಿಗೆ ದರದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದು.
ಕೃಷಿ ಯಾಂತ್ರೀಕರಣ ಯೋಜನೆ : ಕಾರ್ಮಿಕರ ಸಮಸ್ಯೆ ನೀಗಿಸಿ, ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆ ತಗ್ಗಿಸಿ, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಈ ಯೋಜನೆಯಡಿ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ಗರಿಷ್ಠ 1 ಲಕ್ಷ ರೂಪಾಯಿಯವರೆಗೆ ನೀಡಲಾಗುತ್ತದೆ. ಉಳುಮೆಯಿಂದ ಕೊಯ್ಲುವರೆಗೆ ಉಪಯುಕ್ತವಿರುವ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ರೈತರಿಗೆ ನೀಡಲಾಗುತ್ತದೆ.