ಕರ್ನಾಟಕ

karnataka

ETV Bharat / state

ಅವಹೇಳನಕಾರಿ ಟೀಕೆ : ಶಾಸಕರಾದ ಯತ್ನಾಳ್, ​​ಪ್ರಿಯಾಂಕ್ ಖರ್ಗೆಗೆ ಷೋಕಾಸ್ ನೋಟಿಸ್ - ಅವಹೇಳನಕಾರಿ ಟೀಕೆ

ಚುನಾವಣೆ ಪ್ರಚಾರದ ವೇಳೆ ಅವಹೇಳನಕಾರಿ ಟೀಕೆ ಮಾಡಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹಾಗೂ ಕಾಂಗ್ರೆಸ್​​ನ ಪ್ರಿಯಾಂಕ್​ ಖರ್ಗೆಗೆ ಚುನಾವಣಾ ಆಯೋಗದಿಂದ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

derogatory-remarks-show-cause-notices-to-yatnal-and-priyanka-kharge
ಅವಹೇಳಕಾರಿ ಟೀಕೆ : ಶಾಸಕ ಯತ್ನಾಳ್, ​​ಪ್ರಿಯಾಂಕ್ ಖರ್ಗೆಗೆ ಷೋಕಾಸ್ ನೋಟಿಸ್

By

Published : May 3, 2023, 9:09 PM IST

ಬೆಂಗಳೂರು :ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಅವಹೇಳನಕಾರಿ ಮತ್ತು ನಿಂದನಾತ್ಮಕವಾಗಿ ಹೇಳಿಕೆ ನೀಡಿದ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಸಹ ಆದ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದ್ದು, ಇಬ್ಬರಿಗೂ ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಿದ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್​​ ಜಾರಿ ಮಾಡಿದೆ. ಪ್ರಧಾನಿಯವರನ್ನು ವೈಯಕ್ತಿಕವಾಗಿ ಅವಹೇಳನಕಾರಿಯಾಗಿ ಟೀಕಿಸಿರುವುದು ಮಾದರಿ ಚುನಾವಣೆ ನೀತಿ ಸಮಿತಿಯ ಉಲ್ಲಂಘನೆ ವ್ಯಾಪ್ತಿಗೆ ಒಳಪಡುತ್ತದೆ. ನಿಮ್ಮ ಮೇಲೆ ಏಕೆ ನೀತಿ ಸಂಹಿತೆ ಉಲ್ಲಂಘನೆ ಕಾಯ್ದೆ ಅಡಿ ಕ್ರಮ ಜರುಗಿಸಬಾರದು ಎಂದು ನೋಟಿಸ್​ನಲ್ಲಿ ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಭಾರತೀಯ ಜನತಾ ಪಕ್ಷದ ಮುಖಂಡರುಗಳು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು, ಪ್ರಿಯಾಂಕ್ ಖರ್ಗೆ ಅವರಿಗೆ ವಿವರಣೆ ಕೇಳಿ ಷೋಕಾಸ್ ನೋಟಿಸ್​​ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ ಆರೋಪದ ಸಂಬಂಧ ನಾಳೆ ಸಂಜೆಯೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಪ್ರಧಾನಿಯವರನ್ನು ವೈಯಕ್ತಿಕವಾಗಿ ಟೀಕಿಸಿದ ಬಗ್ಗೆ ಮಾದರಿ ಚುನಾವಣೆ ನೀತಿ ಸಂಹಿತೆ ಕಾಯ್ದೆಯಡಿ ನಿಮ್ಮ ಮೇಲೆ ಏಕೆ ಕ್ರಮ ತಗೆದುಕೊಳ್ಳಬಾರದೆಂದು ಕೇಂದ್ರ ಚುನಾವಣೆ ಆಯೋಗವು ಷೋಕಾಸ್ ನೋಟಿಸ್​ನಲ್ಲಿ ಪ್ರಶ್ನಿಸಿದ್ದು, ಉತ್ತರವು ತೃಪ್ತಿಕರವಾಗಿಲ್ಲದಿದ್ದರೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಾಯ್ದೆ ಅಡಿ ಕ್ರಮ ಜರುಗಿಸುವ ಇಂಗಿತವನ್ನು ಕೇಂದ್ರ ಚುನಾವಣಾ ಆಯೋಗ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಪಕ್ಷದ ಹೈಕಮಾಂಡ್​​ ಆದ ಎಐಸಿಸಿ ಮಾಜಿ ಅದ್ಯಕ್ಷೆ ಸೋನಿಯಾ ಗಾಂಧಿಯವರಿಗೆ 'ವಿಷಕನ್ಯೆ' ಎಂದು ನಿಂದಿಸಿದ ಬಿಜೆಪಿ ಹಿರಿಯ ಮುಖಂಡರಾದ ಸ್ಟಾರ್ ಕ್ಯಾಂಪೇನರ್​​ಗಳಲ್ಲಿ ಒಬ್ಬರಾದ ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರದ ಬಿಜೆಪಿ ಅಭ್ಯರ್ಥಿಯಾದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಪ್ಪಳ ಜಿಲ್ಲಾಧಿಕಾರಿ ಷೋಕಾಸ್ ನೋಟಿಸ್ ನೀಡಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡರಾದ ಸೋನಿಯಾ ಗಾಂಧಿಯವರಿಗೆ ವೈಯಕ್ತಿಕವಾಗಿ ಟೀಕಿಸಿ ''ವಿಷಕನ್ಯೆ'' ಎಂದು ಹೇಳಿರುವುದು ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ. ಆ ಪ್ರಕಾರ ತಮ್ಮ ವಿರುದ್ಧ ಏಕೆ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂದು ಕೊಪ್ಪಳ ಜಿಲ್ಲಾ ಚುನಾವಣಾ ಅಧಿಕಾರಿ ಯತ್ನಾಳ್ ಅವರಿಗೆ ನೀಡಿದ ನೋಟಿಸ್​​ನಲ್ಲಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿಯವರ ಬಗ್ಗೆ ನಿಂದನೆಯ ಟೀಕೆ ಬಗ್ಗೆ ನಾಳೆ ಸಂಜೆಯೊಳಗೆ ಉತ್ತರ ನೀಡುವಂತೆ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿ ಬಸನಗೌಡ ಯತ್ನಾಳ್ ಅವರಿಗೆ ಸೂಚಿಸಿದ್ದಾರೆ.

ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಳೆದ ಒಂದು ವಾರದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರುಗಳು ಪರಸ್ಪರ ಹಿರಿಯ ನಾಯಕರುಗಳ ವೈಯಕ್ತಿಕ ಟೀಕೆ ಮಾಡಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ನಿನ್ನೆಯಷ್ಟೇ ವೈಯಕ್ತಿಕ ಟೀಕೆ ಮಾಡುವ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ಸೂಚನೆ ನೀಡಿ ಯಾರೂ ಸಹ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡಿ ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು. ಅವಹೇಳನಕಾರಿಯಾಗಿ ಮಾತನಾಡಬಾರದು, ಮಾದರಿ ಚುನಾವಣೆ ನೀತಿ ಸಂಹಿತೆ ನಿಯಮದಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಸಲಹೆ ನೀಡಿತ್ತು.

ABOUT THE AUTHOR

...view details