ಬೆಂಗಳೂರು:ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಸಂಪುಟ ರಚನೆ ಕಸರತ್ತು ನಡೆಸಿದರೆ, ಇತ್ತ ವಿಧಾನಸೌಧದ ಡಿಕೆಶಿ ಕಚೇರಿಗೆ ಸಿಬ್ಬಂದಿ ವರ್ಗದವರು ಕುಂಬಳಕಾಯಿ ಪೂಜೆ ನೆರವೇರಿಸಿದ್ದಾರೆ.
ಗುರುವಾರ ಬೆಳಗ್ಗೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 335,336,337 ಹಾಗೂ 337(A) ನಲ್ಲಿ ಪೂಜೆ ನೆರವೇರಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಹಂಚಿಕೆ ಮಾಡಲಾಗಿರುವ ಕಚೇರಿಗೆ ನಡೆದ ಪೂಜೆಯಲ್ಲಿ ಪುತ್ರ ಭಾಗಿಯಾಗಿದ್ದರು. ಕಚೇರಿ ಸಿಬ್ಬಂದಿ ವರ್ಗದ ಸಮ್ಮುಖದಲ್ಲಿ ಹಾಗೂ ಸಿದ್ದರಾಮಯ್ಯ ಆಪ್ತ ಶಾಸಕರುಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಪೂಜಾಕಾರ್ಯ ನೆರವೇರಿತು. ಈ ವೇಳೆ ಈಡುಗಾಯಿ ಹಾಗೂ ಕುಂಬಳಕಾಯಿ ಒಡೆಯಲಾಯಿತು.
ಈ ವಿಶೇಷ ಪೂಜೆಯಲ್ಲಿ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕೂಡಾ ಭಾಗಿಯಾಗಿದ್ದರು. ಕಚೇರಿಯಲ್ಲಿ ಮಹಾಲಕ್ಷ್ಮಿ, ಲಕ್ಷ್ಮೀ ವೆಂಕಟೇಶ್ವರ ಹಾಗೂ ಗಂಗಾಧರ ಅಜ್ಜಯ್ಯ ದೇವರ ಫೋಟೋಗಳನ್ನು ಇಡಲಾಗಿದೆ.
ಇನ್ನು ನೂತನವಾಗಿ ಸಚಿವರಾಗಿ ಆಯ್ಕೆ ಆಗಿರುವ ಡಾ. ಜಿ ಪರಮೇಶ್ವರ್ ಅವರಿಗೆ ವಿಧಾನಸೌಧದಲ್ಲಿ 327, 327(A) ರಾಮಲಿಂಗಾ ರೆಡ್ಡಿ ಅವರಿಗೆ 329, 329 (A) ಕೆ.ಜೆ ಜಾರ್ಜ್ ಅವರಿಗೆ 317, 317 (A) ಎಂ ಬಿ ಪಾಟೀಲ್ ಅವರಿಗೆ 344, 344(A) ಮತ್ತು ಜಮೀರ್ ಅಹ್ಮದ್ ಖಾನ್ ಅವರಿಗೆ ವಿಕಾಸಸೌಧದಲ್ಲಿ 143, 146 ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಇಂದು ಹಾಗೂ ನಾಳೆ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಸಂಬಂಧ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸುವ ಕಾರ್ಯದಲ್ಲಿ ನಿರತರಾಗಲಿದ್ದಾರೆ. ಬುಧವಾರ ಮಧ್ಯಾಹ್ನದ ನಂತರ ದೆಹಲಿಗೆ ತೆರಳಿರುವ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯ ಸಹ ದೆಹಲಿ ತಲುಪಿದ್ದು, ಇಂದು ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸುತ್ತಿದ್ದಾರೆ.