ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಶಾಂತಿಯುತ ಚುನಾವಣೆ ನಡೆಸಲು ರಾಜ್ಯ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಕಳೆದ ಬಾರಿ ಹೋಲಿಸಿದರೆ ಸ್ಥಳೀಯ ಪೊಲೀಸರೊಂದಿಗೆ ಈ ಬಾರಿ ಮೂರು ಪಟ್ಟು ಕೇಂದ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲು ಸಿದ್ಧತೆ ನಡೆದಿದೆ.
ಮೇ 10 ರಂದು ರಾಜ್ಯ ಚುನಾವಣೆ ನಿಗದಿಯಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ರಾಜ್ಯ ಪೊಲೀಸರು ಸೂಕ್ತ ತಯಾರಿ ನಡೆಸಿಕೊಂಡಿದ್ದಾರೆ. ರಾಜ್ಯ ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಅರೆಸೇನಾ ಹಾಗೂ ಪ್ಯಾರಾಮಿಲಿಟರಿ ಪಡೆಗಳು ಕಾರ್ಯನಿರ್ವಹಿಸಲಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 105 ಸೆಂಟ್ರಲ್ ಆರ್ಮಿ ಪಡೆ ಕಾರ್ಯನಿರ್ವಹಿಸಿತ್ತು. ಈ ಬಾರಿ 405 ಕೇಂದ್ರ ಪಡೆಗಳು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಇದು ಕಳೆದ ಸಲಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು. ಈಗಾಗಲೇ 20 ಸಾವಿರ ಮಂದಿ ಒಳಗೊಂಡ ಆರ್ಮಿ ತಂಡ ರಾಜ್ಯಕ್ಕೆ ಆಗಮಿಸಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ನಿಯೋಜನೆಗೊಂಡ ಕೇಂದ್ರ ಪಡೆಗಳು ರಾಜ್ಯಕ್ಕೆ ಬರಲಿವೆ.
ಸ್ಥಳೀಯ ಪೊಲೀಸರ ಜೊತೆಗೆ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಮಿಲಿಟರಿ ಪಡೆ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿದೆ. ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ಆರ್ಪಿ) ಎಡಿಜಿಪಿ ಸೀಮಂತ್ ಕುಮಾರ್ ಅವರ ಸೂಚನೆಯಂತೆ ಸೆಂಟ್ರಲ್ ಟೀಂ ಕೆಲಸ ಮಾಡಲಿದೆ.