ಕರ್ನಾಟಕ

karnataka

ETV Bharat / state

ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ಶಿಫಾರಸು: ಮಾನವ ಹಕ್ಕು ಆಯೋಗ ಆದೇಶ

ವಿಶೇಷಚೇತನ ಯುವಕನ ಕಿಡ್ನಿ ಮಾರಾಟ ಹಾಗೂ ನಿಗೂಢ ಸಾವು ಪ್ರಕರಣ ತಿರುಚಿದ ಆರೋಪ - ಮಾನವ ಹಕ್ಕು ಆಯೋಗದಿಂದ ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ಆದೇಶ

departmental-inquiry-recommended-against-five-policemen
ಮಾನವ ಹಕ್ಕು ಆಯೋಗ ಆದೇಶ

By

Published : Jan 4, 2023, 5:22 PM IST

ಬೆಂಗಳೂರು:ವಿಶೇಷಚೇತನ ಯುವಕನ ಕಿಡ್ನಿ ಮಾರಾಟ ಹಾಗೂ ನಿಗೂಢ ಸಾವು ಪ್ರಕರಣ ಸಂಬಂಧ ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ಶಿಫಾರಸು ಮಾಡಿ ರಾಜ್ಯ ಮಾನವ ಹಕ್ಕು ಆಯೋಗ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ‌‌ ಸಂತ್ರಸ್ತನ ಕುಟುಂಬಕ್ಕೆ 14 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಪರಿಹಾರ ಹಣವನ್ನು ಕರ್ತವ್ಯಲೋಪ ಎಸಗಿದ್ದ ಪೊಲೀಸ್‌ ಸಿಬ್ಬಂದಿಯಿಂದಲೇ ಭರಿಸಬೇಕು ಎಂದು ಆದೇಶದಲ್ಲಿ ಹೇಳಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಕೆ.ಬಿ. ಚೆಂಗಪ್ಪ ಆದೇಶ ಹೊರಡಿಸಿದ್ದು, ಈ ಬಗ್ಗೆ ಅಪರಾಧ ತನಿಖಾ ಇಲಾಖೆ (ಸಿಐಡಿ) ಕೂಲಂಕಷ‌ ತನಿಖೆ ನಡೆಸಬೇಕೆಂದು ಶಿಫಾರಸ್ಸಿನಲ್ಲಿ ಉಲ್ಲೇಖಿಸಿದೆ.

ಸಿದ್ಧಾಪುರ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್​ಸ್ಪೆಕ್ಟರ್​ ಎಂ. ಎಲ್​ ಕೃಷ್ಣಮೂರ್ತಿ ವೇತನದಿಂದ 7 ಲಕ್ಷ, ಶಂಕರಚಾರ್ 3 ಲಕ್ಷ, ಪಿಎಸ್ಐಗಳಾದ ಸಂತೋಷ್ ಹಾಗೂ ಅಬ್ರಾಹಂ ಅವರಿಂದ 1.50 ಲಕ್ಷ, ಹೆಡ್​ ಕಾನ್​ಸ್ಟೇಬಲ್​ ಕೆ. ಎಸ್​. ಗೋಪಾಲ್​ ರಿಂದ 1 ಲಕ್ಷ ವಸೂಲಿ ಮಾಡಿ‌ ಪರಿಹಾರ ಹಣವನ್ನು ಸಂತ್ರಸ್ತರ ಕುಟುಂಬಕ್ಕೆ‌ ನೀಡಬೇಕು ಎಂದು‌ ಆಯೋಗ ಸೂಚಿಸಿದೆ. 2020ರಲ್ಲಿ 29 ವರ್ಷದ ವಿಶೇಷಚೇತನ ಶಂಕರಪ್ಪ ಎಂಬುವರ ಕಿಡ್ನಿ ಮಾರಾಟಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಆರು ತಿಂಗಳ ಬಳಿಕ ವಿಳಂಬವಾಗಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ್ದ ಇಬ್ಬರು ಪೊಲೀಸ್​ ಇನ್​ಸ್ಪೆಕ್ಟರ್​ ಸೇರಿ ಐವರ ವಿರುದ್ಧ ವಿಚಾರಣೆ ನಡೆಯಲಿದೆ.

ಪ್ರಕರಣ ಹಿನ್ನೆಲೆ :ಯಾದಗಿರಿ‌ ಮೂಲದ ಸಂತ್ರಸ್ತ ಶಂಕರಪ್ಪ ಎಂಬುವರನ್ನು 2018ರಲ್ಲಿ ಅನಾರೋಗ್ಯ ಹಿನ್ನೆಲೆ ಏಕತಾ ಚಾರಿಟಬಲ್‌ ಟ್ರಸ್ಟ್​ಗೆ ದಾಖಲಿಸಲಾಗಿತ್ತು‌.‌ ಈ ನಡುವೆ ಚಿಕಿತ್ಸೆಗಾಗಿ ಅವರನ್ನು‌ ಆಸ್ಪತ್ತೆಗೆ ಕರೆದೊಯ್ಯುವಾಗ ನಾಪತ್ತೆಯಾಗಿರುವುದಾಗಿ ಕುಟುಂಬಕ್ಕೆ‌ ಟ್ರಸ್ಟ್​ಗೆ ಕರೆಬಂದಿತ್ತು‌. ಟ್ರಸ್ಟ್​ಗೆ ಸೇರಿದ‌ ವಾಸುದೇವ್ ಎಂಬುವರು ನಕಲಿ ದಾಖಲಾತಿ ಸೃಷ್ಟಿಸಿ ಕುಟುಂಬದವರಿಗೆ ನಂಬಿಸಿದ್ದರು. ಒಂದು ತಿಂಗಳಾದರೂ ಶಂಕರಪ್ಪ ಪತ್ತೆಯಾಗದ ಹಿನ್ನೆಲೆ ಕುಟುಂಬಸ್ಥರು ವಾಸುದೇವ್ ಸೇರಿ‌ ಇತರರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ‌ ಪ್ರಕರಣ ದಾಖಲು ಮಾಡಿದ್ದಾರೆ.

ದೂರಿನ ಸಂಬಂಧ ತನಿಖೆ ನಡೆಸಲಾಗಿದೆ. ಸಂತ್ರಸ್ತ ಚಿಕಿತ್ಸೆಗೆ ಒಳಗಾಗಿದ್ದಾಗ ಎರಡು ಕಿಡ್ನಿ ತೆಗೆಯಲಾಗಿದೆ. ಆಪರೇಷನ್‌ ಸಮಯದಲ್ಲಿ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆ ಎಂದು ಆಯೋಗ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತನನ್ನು ಕಿಡ್ನಿ‌ ಕಸಿದು ಲಕ್ಷಾಂತರ ರೂಪಾಯಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ 2020 ಮಾರ್ಚ್ 7ರಂದು ಸಂತ್ರಸ್ತರ ಸಂಬಂಧಿ ಶಿವಾನಂದ್ ಎಂಬುವವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ‌‌ ದೂರು ನೀಡಿದ್ದರು.

ಶಂಕರಪ್ಪ ಅವರ ಸಂಬಂಧಿ ಶಿವಾನಂದ್ ನೀಡಿದ್ದ ದೂರಿನ ಮೇರೆ ಮಾನವ ಹಕ್ಕುಗಳ ಆಯೋಗ ಪೊಲೀಸರ ಸಹಾಯದಿಂದ ವಾಸುದೇವ್​ನನ್ನು ಬಂಧಿಸಿ ವಿಚಾರಣೆ ಒಳಪಡಿಸಿದ್ದರು. ಪೊಲೀಸರು ವಿಚಾರಣೆ ನಡೆಸಿದ ವೇಳೆ ವಾಸುದೇವ್ ಸಂತ್ರಸ್ತನ ಮೂತ್ರಪಿಂಡ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದ‌. ಆದರೆ ಪೊಲೀಸರು ಉದ್ದೇಶಪೂರ್ವಕವಾಗಿ ಹೇಳಿಕೆ‌ ದಾಖಲಿಸಿರಲಿಲ್ಲ. ವಿರುದ್ಧ ದಿಕ್ಕಿನಲ್ಲಿ ತನಿಖೆ‌ ನಡೆಸಿ ಪ್ರಕರಣ ತಿರುಚಿದ ಆರೋಪ ಸಂಬಂಧ ಆಯೋಗವು ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ಆದೇಶಿಸಿದೆ.

ಇದನ್ನೂ ಓದಿ:ಹಣಕ್ಕಾಗಿ ಸ್ನೇಹಿತನ ಕೊಲೆ: ನಾಲ್ವರು ವಿದ್ಯಾರ್ಥಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

ABOUT THE AUTHOR

...view details