ಕರ್ನಾಟಕ

karnataka

ETV Bharat / state

ವೇತನ ನೀಡದ ಕೈಗಾರಿಕೆಗಳಿಗೆ ನೋಟಿಸ್ ನೀಡುವ ನಿರ್ಧಾರದಿಂದ ಹಿಂದೆ ಸರಿದ ಕಾರ್ಮಿಕ ಇಲಾಖೆ - Video interaction with industrialists

ಕಾರ್ಮಿಕರಿಗೆ ವೇತನ ನೀಡದ ಬಗ್ಗೆ ದೂರುಗಳು ಬಂದ ಹಿನ್ನೆಲೆ, ಕೈಗಾರಿಕೆಗಳಿಗೆ ನೋಟಿಸ್​ ನೀಡಲು ಮುಂದಾಗಿದ್ದ ಕಾರ್ಮಿಕ ಇಲಾಖೆ, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

Department of Labor has changed the decision to issue notice
ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ.ಮಣಿವಣ್ಣನ್

By

Published : May 10, 2020, 8:25 AM IST

ಬೆಂಗಳೂರು :ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ನೀಡದ ಕೈಗಾರಿಕೆಗಳಿಗೆ ನೋಟಿಸ್​ ಜಾರಿ ಮಾಡಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿತ್ತು, ಇದೀಗ ಆ ನಿರ್ಧಾರದಿಂದ ಹಿಂದೆ ಸರಿದಿದೆ.

ಲಾಕ್‌ಡೌನ್ ಅವಧಿಯಲ್ಲಿ ಬಹುತೇಕ ಕೈಗಾರಿಕೆಗಳು ಕಾರ್ಮಿಕರಿಗೆ ವೇತನ‌ ನೀಡಿಲ್ಲ.‌ ಇನ್ನು ಕೆಲವರು ಅರ್ಧ ವೇತನ ನೀಡಿದ್ದಾರೆ. ಈ ಸಂಬಂಧ ಸಾಕಷ್ಟು ದೂರುಗಳು ಬಂದಿದ್ದವು. ಇದನ್ನು ಮನಗಂಡು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ.ಮಣಿವಣ್ಣನ್, ವೇತನ ನೀಡದೆ ನಿಯಮ ಉಲ್ಲಂಘಿಸಿದ ಕೈಗಾರಿಕೆಗಳ ವಿರುದ್ಧ ನೋಟಿಸ್​ ಜಾರಿ ಮಾಡುವುದಾಗಿ ಟ್ವೀಟ್​ ಮೂಲಕ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಇದಕ್ಕೆ ತಯಾರಿಯೂ ನಡೆಸಿದ್ದರು.

ವೇತನ ನೀಡದ ಬಗ್ಗೆ ಕಾರ್ಮಿಕರು ದಾಸೋಹ ವೆಬ್ ಸೈಟ್​ನಲ್ಲಿ ದೂರು ನೀಡುವಂತೆ ಕಾರ್ಮಿಕ ಇಲಾಖೆ ತಿಳಿಸಿತ್ತು. ಅದರಂತೆ ಸುಮಾರು 600 ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಅದರನುಗುಣವಾಗಿ ನೋಟಿಸ್​ ಜಾರಿಗೊಳಿಸಲು ಸಿದ್ಧತೆ ನಡೆದಿತ್ತು. ಆದರೆ, ಇದೀಗ ಆ ನಿರ್ಧಾರದಿಂದ ಕಾರ್ಮಿಕ ಇಲಾಖೆ ಬಹುತೇಕ ಹಿಂದೆ‌ ಸರಿದಿದೆ.

ನೋಟಿಸ್​ ಜಾರಿಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಲು ಕಾರಣವೇನು..?

ನೋಟಿಸ್​ ಜಾರಿಗೊಳಿಸುವ ಕಾರ್ಮಿಕ ಇಲಾಖೆಯ ನಿರ್ಧಾರಕ್ಕೆ ಕೈಗಾರಿಕೋದ್ಯಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಲಾಕ್ ‌ಡೌನ್​‌ನಿಂದಾಗಿ ವಹಿವಾಟು ಇಲ್ಲದೆ ಆದಾಯವೇ ಬರಿದಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ನೀಡಲು ಹೇಗೆ ಸಾಧ್ಯ ಎಂದು ಕೈಗಾರಿಕೋದ್ಯಮಿಗಳು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಬಳಿ ಅಳಲು ತೋಡಿಕೊಂಡಿದ್ದರು.

ಕಾರ್ಮಿಕ ಇಲಾಖೆಯೇ ಕಾರ್ಮಿಕರಿಗೆ ದೂರು ನೀಡಲು ಪ್ರೇರೇಪಿಸುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಕೈಗಾರಿಕೋದ್ಯಮಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಕೈಗಾರಿಕೋದ್ಯಮಿಗಳು ತಮ್ಮ ಅಸಹಾಯಕತೆಯನ್ನು ವಿವರಿಸಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಮಂದಿ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು. ಕೈಗಾರಿಕೋದ್ಯಮಿಗಳ ಸಂಕಷ್ಟ ಆಲಿಸಿದ ಮಣಿವಣ್ಣನ್, ನೋಟಿಸ್ ಜಾರಿ ಮಾಡುವ ನಿಲುವಿನಿಂದ ಹಿಂದೆ ಸರಿದಿದ್ದಾರೆ. ಒಂದು ವೇಳೆ ಯಾವುದೇ ಕಂಪೆನಿಗಳು ನೋಟಿಸ್​ ಪಡೆದಿದ್ದರೆ, ಅದನ್ನು ನನಗೆ ವಾಪಸ್​ ಕಳುಹಿಸುವಂತೆ ಪಿ.ಮಣಿವಣ್ಣನ್ ಕೈಗಾರಿಕೋದ್ಯಮಿಗಳಿಗೆ ತಿಳಿಸಿದ್ದಾರೆ.

ಕಠಿಣ ನಿಲುವನ್ನು ಸಡಿಲಿಸಿದ ಇಲಾಖೆ:

ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಸಂಸ್ಥೆಗಳ ಹೆಚ್​​ಆರ್​ಗಳ ಜೊತೆ ಸಂವಾದ ನಡೆಸಿದ ಕಾರ್ಮಿಕ ಇಲಾಖೆ ಕಾಯದರ್ಶಿ, ತಮ್ಮ ಕಠಿಣ ನಿಲುವಿನಿಂದ ಹಿಂದೆ ಸರಿದಿದ್ದು, ಮುಂದಿನ ಆರು ತಿಂಗಳು ಯಾವುದೇ ಕೈಗಾರಿಕೆಗಳಿಗೆ ನೋಟಿಸ್​ ನೀಡದಂತೆ ಕಾರ್ಮಿಕ ಇಲಾಖೆ ಇನ್​ಸ್ಪೆಕ್ಟರ್​ಗಳಿಗೆ ಸೂಚಿಸಿದ್ದಾರೆ. ಒಂದು ವೇಳೆ ವೇತನ ನೀಡದ ಬಗ್ಗೆ ಕಾರ್ಮಿಕರಿಂದ ದೂರು ಸ್ವೀಕರಿಸಿದರೆ, ಇಲಾಖೆ ಆ ಸಂಸ್ಥೆ ವೇತನ ನೀಡುವ ಸ್ಥಿತಿಯಲ್ಲಿ ಇದೆಯೋ ಇಲ್ಲವೋ ಎಂಬವುದರ ಬಗ್ಗೆ ಪರಿಶೀಲನೆ ನಡೆಸಲಿದೆ. ಸಂಸ್ಥೆಯಲ್ಲಿ ಹಣಕಾಸು ಸ್ಥಿತಿ ಚೆನ್ನಾಗಿದ್ದರೆ ಮೊದಲಿಗೆ ಸಮಸ್ಯೆ ಬಗೆಹರಿಸಲು ಸ್ಥಳೀಯ ಕೈಗಾರಿಕಾ ಒಕ್ಕೂಟಗಳನ್ನು ಸಂಪರ್ಕಿಸಲಾಗುವುದು. ಅಲ್ಲೂ ಸಮಸ್ಯೆ ಬಗೆಹರಿಯದಿದ್ದರೆ ಬಳಿಕ ಕಾರ್ಮಿಕ ಇಲಾಖೆ ಆ ಸಂಸ್ಥೆಗೆ ನೋಟಿಸ್​ ಜಾರಿ ಮಾಡಲು ನಿರ್ಧರಿಸಿದೆ.

ಒಂದು ವೇಳೆ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲವಾದರೆ ಕಂಪೆನಿಗಳು ಯಾವುದೇ ಕ್ರಮ ಕೈಗೊಳ್ಳಬಹುದು. ಆದರೆ ಕ್ರಮ ಕೈಗೊಳ್ಳುವ ಮೊದಲು ಕಾರ್ಮಿಕರು ಕಂಟೇನ್​ಮೆಂಟ್​ ಏರಿಯಾದಲ್ಲಿ ಸಿಲುಕಿದ್ದಾರೆ ಎಂಬವುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಇಲಾಖೆ ಸೂಚಿಸಿದೆ.

ABOUT THE AUTHOR

...view details