ಬೆಂಗಳೂರು:ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಅಪಾಯದ ಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳು /ಕೊಠಡಿಗಳನ್ನು ಬಳಸದಂತೆ ಹಾಗೂ ಅಂತಹವುಗಳನ್ನು ತಕ್ಷಣ ಗುರುತಿಸುವಂತೆ ಶಿಕ್ಷಣ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಈಗಾಗಲೇ ಶಿಥಿಲಾವಸ್ಥೆ ತಲುಪಿರುವ ಹಾಗೂ ದುರ್ಬಲವಾಗಿರುವ ಕೆಲವು ಕಟ್ಟಡಗಳು/ಕೊಠಡಿಗಳು ಬಿದ್ದುಹೋಗುವ ಹಾಗೂ ಅಪಾಯದ ಅಂಚಿಗೆ ತಲುಪುವ ಸಾಧ್ಯತೆ ಇದೆ. ಇಂತಹ ಶಾಲಾ ಕಟ್ಟಡಗಳ ಅಥವಾ ಅವುಗಳ ಸನಿಹದಲ್ಲಿ ಶಾಲೆಗಳು ನಡೆಯುತ್ತಿದ್ದು, ಅವುಗಳು ಬಿದ್ದುಹೋದಲ್ಲಿ, ಅಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಪ್ರಾಣಾಪಾಯಕ್ಕೆ ಸಿಲುಕುವ ಸಂಭವವಿರುತ್ತದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಉಪ ನಿರ್ದೇಶಕರು, ಪ್ರಾಂಶುಪಾಲರುಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಖುದ್ದಾಗಿ ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಇಲಾಖೆ ಸೂಚನೆ ನೀಡಿದೆ.
ಇಂತಹ ಸನ್ನಿವೇಶಗಳಲ್ಲಿ ಶಾಲೆ ನಡೆಯುತ್ತಿದ್ದಲ್ಲಿ ಕೂಡಲೇ ಅಲ್ಲಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ತೆರವುಗೊಳಿಸಿ ಶಾಲೆ ನಡೆಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಯಾರೂ ಸಹ ಇಂತಹವುಗಳ ಸಂಪರ್ಕಕ್ಕೆ ಬಾರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಎಸ್ಡಿಎಂಸಿಗಳಿಗೆ ಮತ್ತು ಆಡಳಿತ ಮಂಡಳಿಗಳಿಗೆ ತಿಳಿಸಿದೆ.
ಇನ್ನು, ಸಿಆರ್ಪಿ ಮತ್ತು ಬಿಆರ್ಪಿಗಳ ಮೂಲಕ ಇಂತಹ ಶಾಲಾ ಕಟ್ಟಡಗಳ ಸಮೀಕ್ಷೆ ನಡೆಸುವಂತೆ ತಿಳಿಸಲಾಗಿದೆ. ಈ ಮೂಲಕ ಅವುಗಳ ದುರಸ್ಥಿಗಾಗಿ ರಾಜ್ಯ/ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯಡಿ ಹಾಗೂ ಇತರೆ ಲಭ್ಯವಿರುವ ಅನುದಾನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ, ಡಿಎಂಎಫ್ ಯೋಜನೆಯಡಿ, ಜಿಲ್ಲಾ ಪಂಚಾಯತ್ ಸೇರ್ಪಡೆ ಹಾಗೂ ಮಾರ್ಪಾಡು ಯೋಜನೆಯಡಿ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಆ ಮೂಲಕ ಅನುದಾನ ಬಿಡುಗಡೆ ಮಾಡಿಸಿಕೊಂಡು ಕಟ್ಟಡಗಳ ದುರಸ್ತಿಯನ್ನು ಕೈಗೊಳ್ಳುವಂತೆ ತಿಳಿಸಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ