ಬೆಂಗಳೂರು: ಶಾರೀರಿಕ ಸಂಬಂಧ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಮತ್ತು ಆತನ ಪೋಷಕರ ವಿರುದ್ಧ ಪತ್ನಿ ಸಲ್ಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಹಿಂದೂ ವಿವಾಹ ಕಾಯಿದೆ-1955 ರ ಪ್ರಕಾರ, ಪತಿಯಿಂದ ದೈಹಿಕ ಸಂಬಂಧವನ್ನು ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ. ಆದರೆ ಐಪಿಸಿ ಸೆಕ್ಷನ್ 489A ಅಡಿಯಲ್ಲಿ ಈ ಪ್ರಕರಣ ಬರುವುದಿಲ್ಲ ಮತ್ತು ಇದು ಅಪರಾಧವೂ ಅಲ್ಲ ಎಂದು ಪೀಠವು ಗಮನಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಹಾಗೂ 1961ರ ವರದಕ್ಷಿಣೆ ವಿರೋಧಿ ಕಾಯ್ದೆಯ ಸೆಕ್ಷನ್ 4ರ ಅಡಿ ತನ್ನ ಪೋಷಕರು ಹಾಗೂ ತನ್ನ ವಿರುದ್ಧ ಪೊಲೀಸರು ಸಲ್ಲಿಸಿದ ಆರೋಪಪಟ್ಟಿ ವಿರುದ್ಧ ಪತಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ವಿರುದ್ಧ ಇರುವ ಒಂದೇ ಒಂದು ಆರೋಪ ಎಂದರೆ, ಆತನೊಬ್ಬ ಧಾರ್ಮಿಕ ಅನುಯಾಯಿ ಆಗಿದ್ದಾರೆ. ಆತ ಹೇಳಿದಂತೆ ಪ್ರೀತಿ ಎಂದರೆ ದೈಹಿಕ ಸಂಬಂಧವಲ್ಲ. ಅದು ಆತ್ಮಗಳ ಸಮ್ಮಿಲನ ಎಂದಿದ್ದಾರೆ. ಹೀಗಾಗಿ ಪತ್ನಿಯ ಜೊತೆ ದೈಹಿಕ ಸಂಬಂಧ ನಡೆಸಲು ಆತ ನಿರಾಕರಿಸಿರುವುದನ್ನು ಪೀಠವು ಗಮನಿಸಿದೆ.
ಅರ್ಜಿದಾರ ತನ್ನ ಪತ್ನಿ ಜೊತೆ ದೈಹಿಕ ಸಂಬಂಧ ಹೊಂದುವ ಬಗ್ಗೆ ಯೋಚಿಸಿಯೇ ಇಲ್ಲ. ಇದು ನಿಶಂಸೆಯವಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12 (1) (ಎ) ಅಡಿಯಲ್ಲಿ ಕ್ರೌರ್ಯವಾಗುತ್ತದೆ. ಆದರೆ ಇದು ಭಾರತೀಯ ದಂಡ ಸಂಹಿತೆಯ 498 (ಎ) ಅಡಿ ಉಲ್ಲೇಖಿಸಿದ ಅಪರಾಧದಡಿ ಬರುವುದಿಲ್ಲ ಎಂದು ಪೀಠ ಹೇಳುವ ಮೂಲಕ ಪತಿ ಹಾಗೂ ಆತನ ಪೋಷಕರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿತು.
ಪತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಮುಂದುವರಿಸಲಾಗುವುದಿಲ್ಲ. ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಮತ್ತು ತಪ್ಪು ನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿತು.