ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅತಿಯಾದ ಮಳೆಯು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅತಿಯಾದ ಮಳೆಯಿಂದಾಗಿ ಟೈಫಾಯಿಡ್, ಕಾಲರ, ಡೆಂಘೀ ಹಾಗೂ ವೈರಲ್ ಫೀವರ್‌ಗಳು ಹೆಚ್ಚಳವಾಗುತ್ತಿದೆ.
ಈಗಾಗಲೇ ಆಸ್ಪತ್ರೆಗಳಲ್ಲಿ ಈ ಜ್ವರದ ನಿಮಿತ್ತ ವೈದ್ಯರನ್ನು ಭೇಟಿ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಕುರಿತು ಫೊರ್ಟಿಸ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರರಾದ ಡಾ ಆದಿತ್ಯ ಚೌತಿ ಮಾತನಾಡಿ, ಬೆಂಗಳೂರಿನಲ್ಲಿ ಅತಿಯಾದ ಮಳೆಯಿಂದಾಗಿ ಕೆಲವರ ಮನೆಗೆ ಕಲುಷಿತ ಮಳೆ ನೀರು ನುಗ್ಗಿದೆ. ಈ ನೀರಿನಿಂದ ಮನೆಯಲ್ಲಿರುವ ಜನರಿಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.
ಅದರಲ್ಲೂ ಮಕ್ಕಳ ಆರೋಗ್ಯ ಸೂಕ್ಷ್ಮವಾದ್ದರಿಂದ ಫೀವರ್, ಟೈಫಾಯಿಡ್, ಕಾಲರ, ಡೆಂಘೀ ಮಲೇರಿಯಾದಂತಹ ರೋಗಗಳು ಕಾಡಬಹುದು. ಕುಡಿಯುವ ನೀರಿನೊಂದಿಗೆ ಕಲುಷಿತ ನೀರಿನ ಮಿಶ್ರಣವಾಗಿ ಹೊಟ್ಟೆನೋವು, ವಾಂತಿ, ಶ್ವಾಸನಾಳ ಸೋಂಕುಗಳು ಹೆಚ್ಚಳವಾಗುತ್ತಿದೆ. ಕುಡಿಯುವ ನೀರಿನ ಮಾಲಿನ್ಯವು ಟೈಫಾಯಿಡ್ ಜ್ವರ, ಕಾಲರಾ, ಲೆಪ್ಟೊಸ್ಪೈರೋಸಿಸ್ ಮತ್ತು ಹೆಪಟೈಟಿಸ್ ಎ ಯಂತಹ ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರವಾಹಕ್ಕೊಳಗಾದ ಪ್ರದೇಶದ ಜನರು ಪರೀಕ್ಷಿಸಿಕೊಳ್ಳಿ: ಪ್ರವಾಹಕ್ಕೊಳಗಾದ ಪ್ರದೇಶದ ಜನರು ತಮಗೆ ಜ್ವರ, ಕೆಮ್ಮಿನ ರೋಗಲಕ್ಷಣಗಳು ಇಲ್ಲದೇ ಹೋದರೂ ಒಮ್ಮೆ ಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು. ಕೊಳಚೆ ನೀರಿನಲ್ಲಿರುವ ರೋಗಾಣುಗಳು ನಿಮ್ಮ ದೇಹ ಸೇರಿ ಇತರ ರೋಗಗಳಿಗೆ ಕಾರಣವಾಗುವ ಮೊದಲು ಸಾಮಾನ್ಯ ಚೆಕಪ್ ಮಾಡಿಸಿಕೊಳ್ಳಬೇಕು. ಪ್ರತಿ ಆಸ್ಪತ್ರೆಯಲ್ಲೂ ಡೆಂಘೀ ಮತ್ತು ಮಲೇರಿಯಾದಂತಹ ಸೋಂಕುಗಳ ಹೆಚ್ಚಳವಾಗುತ್ತಿದೆ. ಅದರಲ್ಲೂ ಮಕ್ಕಳು, ವಯಸ್ಸಾದವರಲ್ಲಿ ಈ ವೈರಾಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ತಡೆಗಟ್ಟುವ ಕ್ರಮಗಳೇನು :
- ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುತ್ತಿರಿ .
- ಅಡುಗೆ ಮಾಡುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ.
- ಚೆನ್ನಾಗಿ ಬೇಯಿಸಿದ ಆಹಾರ ಮತ್ತು ಫಿಲ್ಟರ್ ಮಾಡಿದ ನೀರನ್ನು ಮಾತ್ರ ಸೇವಿಸಿ.
- ಪಾತ್ರೆಗಳನ್ನು ಚೆನ್ನಾಗಿ ತೊಳೆದು ಮುಚ್ಚಿಡಿ.
- ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕೈಗೊಳ್ಳಲು ನಾಗರಿಕ ಸಂಸ್ಥೆಗೆ ಕರೆ ಮಾಡಿ.
- ಕಿಟಕಿ ಬಾಗಿಲುಗಳಿಗೆ ನೆಟ್ ರೀತಿಯ ಮೆಶ್ ಹಾಕುವುದರಿಂದ ಸೊಳ್ಳೆ ಬರುವುದನ್ನು ತಡೆಬಹುದು.
ಇದನ್ನೂ ಓದಿ :ಕೋವಿಡ್ ಸೋಂಕಿತ ವಯೋವೃದ್ಧರಿಗೆ ಮರೆವಿನ ಕಾಯಿಲೆ ಸಾಧ್ಯತೆ: ಅಧ್ಯಯನ