ಬೆಂಗಳೂರು:ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಆದೇಶ ಹಿಂಪಡೆಯಬೇಕು. ಅಲ್ಲದೇ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನೀಡಬೇಕೆಂದು ಒತ್ತಾಯಿಸಿ, ಭಾನುವಾರದಿಂದ ನೂರಾರು ಅಭ್ಯರ್ಥಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಫ್ರೀಡಂ ಪಾರ್ಕಿನ ಮೈದಾನದಲ್ಲಿ ನೂರಾರು ಅಭ್ಯರ್ಥಿಗಳು ಜಮಾಯಿಸಿದ್ದು, ಧರಣಿ ನಡೆಸುತ್ತಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಅವ್ಯವಹಾರ ಕಂಡುಬಂದ ಹಿನ್ನೆಲೆ ಸರ್ಕಾರ ಮರುಪರೀಕ್ಷೆಗೆ ಆದೇಶ ನೀಡಿತ್ತು. ಇದು ಒಳ್ಳೆಯ ಕ್ರಮವಲ್ಲ ಎಂದು ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದು ಸಮಂಜಸವಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ನಾವು ಬಡ ಕುಟುಂಬದವರು, ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ. ಸರ್ಕಾರ ನಮಗೆ ಅನ್ಯಾಯ ಮಾಡಬಾರದು ಎಂದು ಧರಣಿನಿರತ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.
ಅಭ್ಯರ್ಥಿಗಳಿಂದ ಅಹೋರಾತ್ರಿ ಧರಣಿ ಪರೀಕ್ಷೆಗಾಗಿ ಐದಾರು ವರ್ಷದಿಂದ ತಯಾರಿ:ಈ ಪರೀಕ್ಷೆಗಾಗಿ ಐದಾರು ವರ್ಷಗಳಿಂದ ತಯಾರಿ ಮಾಡಿದ್ದೇವೆ. ಕೆಲಸ ಕಾರ್ಯಗಳನ್ನು ಬಿಟ್ಟು, ಹಗಲು ರಾತ್ರಿ ಎನ್ನದೆ ಶ್ರಮ ಹಾಕಿ ಪಾಸ್ ಮಾಡಿದ್ದೇವೆ. ಈಗ ನಮಗೆ ಈ ಕೆಲಸ ಸಿಗದಿದ್ದರೆ ನಮ್ಮ ವಯೋಮಿತಿ ದಾಟಲಿದ್ದು, ನಮ್ಮ ಪರಿಶ್ರಮವೆಲ್ಲ ವ್ಯರ್ಥವಾಗುತ್ತದೆ. ಬೇರೆಯವರು ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಎಂದು ಪ್ರಶ್ನಿಸುತ್ತಿದ್ದಾರೆ.
ಪಿಎಸ್‌ಐ ಆಕಾಂಕ್ಷಿಗಳ ಧರಣಿ:500ಕ್ಕೂ ಹೆಚ್ಚು ಪಿಎಸ್‌ಐ ಆಕಾಂಕ್ಷಿಗಳು ಭಾನುವಾರದಿಂದ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮರುಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ, ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ವಿಧಾನಸಭೆಯಲ್ಲಿ ಪಿಎಸ್ಐ ಹಗರಣದ ಸದ್ದು : ಉಭಯ ಸದಸ್ಯರ ನಡುವೆ ಮಾತಿನ ಚಕಮಕಿ
ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯ: ಪಿಎಸ್ಐ ನೇಮಕಾತಿ ಪರೀಕ್ಷೆಗೆಂದು ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದೇವೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಬೇಡಿ. ನೇಮಕಾತಿ ಆದೇಶ ನೀಡಿ. ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಅಭ್ಯರ್ಥಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ.