ಬೆಂಗಳೂರು:ಒಕ್ಕಲಿಗರ ಸಂಘದಲ್ಲಿ ನಡೆದ ಮೀಸಲಾತಿ ಹೆಚ್ಚಳ ಸಂಬಂಧದ ಪೂರ್ವಭಾವಿ ಸಭೆಯಲ್ಲಿ ಒಕ್ಕಲಿಗರ ಮೀಸಲಾತಿ ಹೆಚ್ಚಳದ ನಿರ್ಣಯದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವ ಆರ್. ಅಶೋಕ್, ಯಾವೆಲ್ಲ ಬೇಡಿಕೆ ಇದೆಯೋ ಅದರ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಸರ್ಕಾರದ ಪರವಾಗಿ ಬಂದು ಬೇಡಿಕೆ ಸ್ವೀಕರಿಸಿದ್ದೇನೆ ಎಂದರು.
ಒಕ್ಕಲಿಗ ಸಮುದಾಯಕ್ಕೆ 4% ಮೀಸಲಾತಿ ಇದೆ. ಇದರಲ್ಲೂ ತಾರತಮ್ಯ, ಅನ್ಯಾಯ ಆಗಿದೆ. ಜನಸಂಖ್ಯೆಗೆ ಅನುಸಾರ ಮೀಸಲಾತಿ ಸಿಗುತ್ತಿಲ್ಲ ಎಂದು ಸಮುದಾಯ ಬೇಡಿಕೆ ಇಟ್ಟಿದೆ. ಸಮುದಾಯದ ಆಗ್ರಹವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಒಕ್ಕಲಿಗ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂದು ಜಾತಿ ಸಮೀಕ್ಷೆಯಿಂದ ತಿಳಿಯಬೇಕಿದೆ. ನಾನು ಸರ್ಕಾರದ ಪರವಾಗಿಯೂ ಬಂದಿದ್ದೇನೆ, ಸಮುದಾಯದ ಪರವಾಗಿಯೂ ಬಂದಿದ್ದೇನೆ. ಸಮುದಾಯದ ಮುಖಂಡರಾಗಿ ಸರ್ಕಾರದಲ್ಲಿ ನಾವೆಲ್ಲ ಇದ್ದೇವೆ, ಕಾಂಗ್ರೆಸ್ನಲ್ಲಿ ಡಿಕೆಶಿ ಮತ್ತಿತರರು ಇದ್ದಾರೆ. ಸಮುದಾಯದ ಕಾರ್ಯಕ್ರಮದಲ್ಲಿ ಎಲ್ಲರೂ ಪಕ್ಷಾತೀತವಾಗಿ ಬರಬೇಕು. ಎಲ್ಲಾ ಜಾತಿಗಳ ಜನ ಭಾರತದ ಸಂವಿಧಾನದ ಅಡಿ ಬದುಕುತ್ತಿದ್ದಾರೆ. ನಮ್ಮ ಸರ್ಕಾರ ಇರುವಾಗಲೇ ನಮ್ಮ ಸಮುದಾಯ ಎದ್ದು ನಿಂತಿದೆ. ಇದು ನಮಗೆ ಸಂತಸ ತಂದಿದೆ ಎಂದರು.
ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ:ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ, ಸಂಸದ ಡಿ ವಿ ಸದಾನಂದ ಗೌಡ, ನಾನು ಜವಾಬ್ದಾರಿಯುತ ಆಡಳಿತ ಪಕ್ಷದಲ್ಲಿದ್ದೇನೆ. ಮೀಸಲಾತಿ ಬಗ್ಗೆ ನಾನು ಎಲ್ಲಿ ಪ್ರಸ್ತಾಪ ಮಾಡಬೇಕೋ ಅಲ್ಲಿ ಪ್ರಸ್ತಾಪ ಮಾಡುತ್ತೇನೆ. ನಮ್ಮ ಸಮಾಜದ ಕೆಲಸಗಳನ್ನು ಮಾಡುವಲ್ಲಿ ನಾವು ಸ್ವಲ್ಪ ಹಿಂದೆ ಉಳಿದಿದ್ದು. ಮಾಜಿ ಪ್ರಧಾನಿಗಳ ನೇತೃತ್ವದಲ್ಲಿ ಎಲ್ಲರೂ ಸೇರಿ ಕೇಂದ್ರದ ಮೇಲೆ ಮೀಸಲಾತಿಗೆ ಒತ್ತಡ ಹಾಕ್ತೇವೆ. ಇದೇ 9ರಿಂದ ಸಂಸತ್ ಅಧಿವೇಶನದಲ್ಲಿ ಮೀಸಲಾತಿಗೆ ನೀಡುವಂತೆ ಒತ್ತಾಯಿಸುತ್ತೇವೆ ಎಂದರು.