ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬೆಂಗಳೂರು :ಸಚಿವ ಕೆ ಎನ್ ರಾಜಣ್ಣ ಹೇಳಿರುವಂತೆ ಮೂವರು ಡಿಸಿಎಂ ಬೇಡಿಕೆ ಸಂಬಂಧ ಮುಖ್ಯಮಂತ್ರಿಗಳೇ ಇದಕ್ಕೆಲ್ಲಾ ಉತ್ತರ ಕೊಡಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಹಳ ಸಂತೋಷ. ಎಲ್ಲರ ಮನಸ್ಸಿಗೂ ಸಮಾಧಾನ. ನನ್ನನ್ನು ಡಿಸಿಎಂ ಆಗಿ ನೇಮಕ ಮಾಡಿರುವುದು ಮುಖ್ಯಮಂತ್ರಿಗಳು ಮತ್ತು ಗವರ್ನರ್. ಇದಕ್ಕೆಲ್ಲಾ ಮುಖ್ಯಮಂತ್ರಿಗಳೇ ಉತ್ತರ ಕೊಡಬೇಕು ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಸನಿಹದಲ್ಲಿ ಈ ತರಹದ ಬೇಡಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು, ಸಿಎಂರನ್ನು ಕೇಳಬೇಕು. ನಾವೆಲ್ಲಾ ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡುವವರು. ನಾನು ತೆಲಂಗಾಣಕ್ಕೆ ಹೋಗಿದ್ದೆ. ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ನೋಡಿದೆ ಎಂದು ತಿಳಿಸಿದರು.
ನಮ್ಮದು ಕಾಂಗ್ರೆಸ್ ಬಣ :ಕಾಂಗ್ರೆಸ್ನಲ್ಲಿನ ಬಣ ವಿಚಾರವಾಗಿ ಮಾತನಾಡಿ, ನಿಮ್ಮ ಹತ್ತಿರ ಬಣ ಇರಬಹುದು. ನಾನು ರಾಜಕೀಯ ಜೀವನದಲ್ಲಿ ಯಾವುದೇ ಬಣಕ್ಕೆ ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಬಣ ಮಾಡಬೇಕಾದರೆ ಎಸ್ಎಂ ಕೃಷ್ಣ ಕಾಲದಲ್ಲಿ, ಬಂಗಾರಪ್ಪ ಅವರ ಕಾಲದಲ್ಲೂ ನನಗೆ ಬಣ ಮಾಡುವ ಶಕ್ತಿ ಇತ್ತು. ಆದರೆ ನನಗೆ ಒಂದೇ ಒಂದು ಬಣ ಇರುವುದು, ಅದು ಕಾಂಗ್ರೆಸ್ ಬಣ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ನಾನು ಮುಲಾಜಿಲ್ಲದೆ ಕೇಳುತ್ತೇನೆ :ಯಾರು ಮಾತನಾಡಿದರೂ ಅವರ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಬೇಕು. ಈಗ ರಾಜಣ್ಣ ಮಾತನಾಡಿದ್ದಾರೆ, ಅವರು ಮುಖ್ಯಮಂತ್ರಿಗಳ ಬಳಿ ಉತ್ತರ ಕೇಳಬೇಕಾಗಿರುವುದು. ಬಿ ಕೆ ಹರಿಪ್ರಸಾದ್ಗೆ ಉತ್ತರ ಹೇಳಬೇಕಾಗಿರುವುದು ಕಾಂಗ್ರೆಸ್ ಹೈಕಮಾಂಡ್. ಸಂವಿಧಾನದ ಪುಸ್ತಕ ಇದೆ. ನಾನು ನಿಮಗೆ ಕಳಿಸಿಕೊಡುತ್ತೇನೆ. ಯಾರು ಯಾರನ್ನು ಕೇಳಬೇಕು. ಯಾರು ಯಾರಿಗೆ ಉತ್ತರ ಕೇಳಬೇಕು ಎಂದು ಇದೆ. ಅವರು ಯಾರನ್ನು ಕೇಳ್ತಾರೆ ಕೇಳಲಿ. ನಾನು ಯಾರನ್ನು ಕೇಳಬೇಕು ಕೇಳ್ತೀನಿ. ಮುಲಾಜಿಲ್ಲದೆ ಕೇಳುತ್ತೇನೆ ಎಂದು ತಿಳಿಸಿದರು.
ನಾನು ಹೈಕಮಾಂಡ್ ಆದೇಶ ಪಾಲಿಸುತ್ತೇನೆ.. ಸಿದ್ದರಾಮಯ್ಯ: ಮೂರು ಡಿಸಿಎಂ ವಿಚಾರವಾಗಿ ಭಾನುವಾರ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ನಾನು ಹೈಕಮಾಂಡ್ ಆದೇಶವನ್ನು ಪಾಲನೆ ಮಾಡುತ್ತೇನೆ. ಆಗ ಒಬ್ಬರೇ ಡಿಸಿಎಂ ಸಾಕು ಎಂದು ಹೇಳಿದ್ದರು. ಈಗ ಇವರು ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ಹೈಕಮಾಂಡ್ ಏನು ಹೇಳುತ್ತದೋ ಹಾಗೆ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದರು.
ಮೂರು ಡಿಸಿಎಂ ಹುದ್ದೆಗೆ ರಾಜಣ್ಣ ಆಗ್ರಹ :ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಇತ್ತೀಚೆಗೆ ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿದರೆ ಎಲ್ಲಾ ಸಮುದಾಯಗಳು ನಮಗೆ ಬೆಂಬಲ ನೀಡಲು ಅನುಕೂಲ ಆಗುತ್ತದೆ. ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತರಿಗೆ, ವೀರಶೈವ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ :'ಮೂರು ಡಿಸಿಎಂ ಹುದ್ದೆಯ ಬೇಡಿಕೆ ತಪ್ಪಲ್ಲ': ಮಂಡ್ಯದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ