ಬೆಂಗಳೂರು: ತನ್ನನ್ನು ದಂಡಿಸುವವರು ಯಾರೂ ಇಲ್ಲ ಎಂಬ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿ ನಡೆದುಕೊಂಡ ರಾವಣನ ಸ್ಥಿತಿ ಏನಾಯಿತು ಎಂಬುದು ಇತಿಹಾಸ ಬಲ್ಲವರಿಗೆ ತಿಳಿದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಬೃಹತ್ ರೈತ ಸಮಾವೇಶದಲ್ಲಿ ಕಹಳೆ ಮೊಳಗಿಸಿ, ರಾಗಿ ತೂರಿ ಸಮಾರಂಭಕ್ಕೆ ಚಾಲನೆ ನೀಡಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿ, ಭ್ರಷ್ಟಾಚಾರಮುಕ್ತ ರಾಜ್ಯವನ್ನು ಜನ ನಿರೀಕ್ಷಿಸುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ರೈತರಿಗೆ ಮಾರಕವಾಗುವ ನಾಲ್ಕು ಕಾಯ್ದೆಯನ್ನು ಜಾರಿಗೆ ತಂದು ನಂತರ ರೈತರ ವಿರೋಧ ಎದುರಿಸಲಾಗದೆ ಹಿಂದಕ್ಕೆ ಪಡೆದಿದೆ. ನಾವು ದೆಹಲಿ ನಂತರ ಪಂಜಾಬ್ನಲ್ಲಿ ಅಧಿಕಾರ ಹಿಡಿದಿದ್ದು, ಮುಂದೆ ಕರ್ನಾಟಕದಲ್ಲಿಯೂ ಆಡಳಿತ ನಡೆಸುತ್ತೇವೆ ಎಂದು ವಿಶ್ವಾಸ ಹೊರಹಾಕಿದರು.
ಇದನ್ನೂ ಓದಿ :ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಸಂಚು.. ಮೌಲ್ವಿ ವಾಸಿಂ ಪಠಾಣ್ ವಿಡಿಯೋ ಬಿಡುಗಡೆ
ನಾನು ನಿಮ್ಮಂತೆಯೇ ಸರಳ ವ್ಯಕ್ತಿ. ನನಗೆ ರಾಜಕೀಯ ಮಾಡಲು ಬರುವುದಿಲ್ಲ. ಸಾಮಾನ್ಯ ನಾಗರಿಕ ಏನನ್ನು ಬಯಸುತ್ತಾನೋ ಅದನ್ನು ನಮ್ಮ ಸರ್ಕಾರ ನೀಡುವ ಕಾರ್ಯ ಮಾಡಿದೆ. ದೆಹಲಿಯಲ್ಲಿ ಇಂದು ಉತ್ತಮ ಶಿಕ್ಷಣ ಆರೋಗ್ಯ ನೀಡುವ ಕಾರ್ಯ ಆಗಿದೆ. ಅಲ್ಲಿ ಎರಡು ಕೋಟಿ ಜನಸಂಖ್ಯೆ ಇದ್ದು ಎಂತಹುದೇ ಮಾರಕ ಕಾಯಿಲೆ ಬಂದರೂ ಸಹ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದೊಂದು ಮ್ಯಾಜಿಕ್ ಎಂದು ವಿವರಿಸಿದರು.
ಬಹುತೇಕ ರಾಜ್ಯಗಳಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗುತ್ತಿದೆ. ತಮ್ಮ ಹಾಗೂ ತಮ್ಮ ಕುಟುಂಬದವರ ಜೀವ ರಕ್ಷಣೆಯೇ ಅತಿ ದೊಡ್ಡ ಜವಾಬ್ದಾರಿ ಎನ್ನುವ ರೀತಿ ರಾಜಕಾರಣಿಗಳು ವರ್ತಿಸುತ್ತಾರೆ. ಆದರೆ, ನನಗೆ ಜೀವದ ಭಯ ಇಲ್ಲ. ಬಲಾತ್ಕಾರ ಮಾಡುವವರು ಒಂದು ಪಕ್ಷ ಸೇರುತ್ತಾರೆ. ಭ್ರಷ್ಟಾಚಾರ ಮಾಡುವವರೆಲ್ಲರೂ ಮತ್ತೊಂದು ಪಕ್ಷ ಸೇರುತ್ತಾರೆ. ಇದು ಯಾವ ಪಕ್ಷ ಎನ್ನುವುದು ನಿಮಗೆಲ್ಲ ತಿಳಿದಿದೆ. ನಮಗೆ ಇಂಥವರನ್ನು ಬಳಸಿಕೊಂಡು ಮುನ್ನಡೆಯುವ ಅಗತ್ಯ ಇಲ್ಲ ಎಂದರು.